ಚೆಲ್ಲಬೇಡಿರಣ್ಣಾ..ಚಿನ್ನಕ್ಕಿಂತ ಹೆಚ್ಚು ಅನ್ನದ ಬೆಲೆ..!

ಈ ಸುದ್ದಿಯನ್ನು ಶೇರ್ ಮಾಡಿ

Anna--001

– ಗುರುಪ್ರಸಾದ್, ಕೋಳಾಲ

ಅನ್ನ ಪರಬ್ರಹ್ಮ , ಅನ್ನದಾತೋ ಸುಖಿಭವ ಎಂದೆಲ್ಲ ಹೇಳುತ್ತೇವೆ, ಹಾಗೆಯೇ ಒಂದೊಂದು ಅಕ್ಕಿಯ ಕಾಳಿನಲ್ಲೂ ತಿನ್ನೋರ ಹೆಸರು ಕೆತ್ತಿಹುದು ಎಂದೆಲ್ಲ ಹೇಳುತ್ತೇವೆ.  ಒಂದು ಅಕ್ಕಿಕಾಳನ್ನು ಬೆಳೆಯಬೇಕಾದರೆ ಅನ್ನದಾತ (ರೈತ) ಎಷ್ಟೋ ಶ್ರಮವನ್ನು ಹಾಕುತ್ತಾನೆ, ಆದರೆ ರೈತನ ಬೆವರಿಗೆ ತಕ್ಕ ಪ್ರತಿಫಲ ಕೊಡುವ ಬದಲು ಇಂದು ಜನರು ಅನ್ನವನ್ನು ಪೋಲು ಮಾಡುತ್ತಿರುವುದು ನಿಜಕ್ಕೂ ಅನ್ನದಾತನಿಗೆ ಮಾಡುವ ಅವಮಾನವೇ ಸರಿ. ಮಳೆರಾಯನ ಕಣ್ಣಾಮುಚ್ಚಾಲೆ, ಗಗನಕ್ಕೇರಿದ ಬಿತ್ತನೆ ಬೀಜ, ಔಷಧಿ, ಕೂಲಿ ಕಾರ್ಮಿಕರ ಕೊರತೆ ಇವೆಲ್ಲದರ ಸವಾಲನ್ನು ಎದುರಿಸುವ ಅನ್ನದಾತ ಇಡೀ ದೇಶಕ್ಕೆ ಅನ್ನ ನೀಡುತ್ತಾನೆ…. ಇದರ ಅರಿವಿಲ್ಲದೆ ನಮ್ಮ ಪ್ರಜ್ಞಾವಂತರಲ್ಲಿ ಎಷ್ಟೋ ಮಂದಿ ಆಹಾರವನ್ನು ಬಿಸಾಡುತ್ತಿರುವುದು ದುರದೃಷ್ಟಕರ ಸಂಗತಿ.

ಚೆಲ್ಲಬೇಡಿರಣ್ಣಾ ಚಿನ್ನಕ್ಕಿಂತಲೂ ಹೆಚ್ಚು ಈ ಅನ್ನ , ತಿನ್ನುವ ಹಕ್ಕಿದೆ ಬಿಸಾಡುವ ಹಕ್ಕಿಲ್ಲ , ಅನ್ನದೇವತೆಯನ್ನು ಕಸದ ರಾಶಿ ಮಾಡಬೇಡಿ, ಉಂಡೆಲೆಯಲ್ಲಿ ಉಳಿಸುವ ಕಯ್ಯಾಲಿ ನಿಮಗೇಕೆ ಇಂತಹ ಹಲವು ಘೋಷವಾಕ್ಯಗಳುಳ್ಳ ಭಿತ್ತಿಪತ್ರಗಳನ್ನು ಹಿಡಿದು ಆಹಾರ ಸಂರಕ್ಷಣೆಯ ಬಗ್ಗೆ ಬೆಂಗಳೂರಿನ ಚಾಮರಾಜಪೇಟೆಯ ಯುವರಾಜ್ ಎಂಬ ವ್ಯಕ್ತಿ ಜಾಗೃತಿ ಮೂಡಿಸುವ ಕಾರ್ಯಕೈಗೊಂಡಿದ್ದಾರೆ. ಕಲ್ಯಾಣಮಂಟಪ, ಮನೆಗಳು ಹಾಗೂ ಇತರೆ ಶುಭಸಂದರ್ಭಗಳಲ್ಲಿ ಉಳಿಯುವ ಆಹಾರವನ್ನು ಪಡೆದು ಹೊಟ್ಟೆಹಸಿವಿನಿಂದ ಬಳಲುತ್ತಿರುವವರಿಗೆ ನೀಡುವ ಮೂಲಕ ಆಹಾರ ಮೌಲ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಾರ್ಥಕತೆ ಪ್ರಯತ್ನ ಮಾಡುತ್ತಿದ್ದಾರೆ.

anna--02

ಇವರ ಈ ಕಾರ್ಯಕ್ಕೆ ಸ್ನೇಹಿತರು, ಹಿತೈಷಿಗಳು, ಸಂಘ ಸಂಸ್ಥೆಗಳು ಕೂಡ ಕೈಜೋಡಿಸಿವೆ. ಬೆಂಗಳೂರಿನಲ್ಲಿ ಕಲ್ಯಾಣಮಂಟಪಗಳಲ್ಲಿ ವರ್ಷಕ್ಕೆ ಏನಿಲ್ಲ ಅಂದರೂ 400 ಕೋಟಿ ರೂ. ಮೌಲ್ಯದ ಆಹಾರ ವ್ಯರ್ಥವಾಗುತ್ತಿದೆ ಎಂದು ಅಂದಾಜಿಸಲಾಗಿದೆ, ಇದರಲ್ಲಿ ಬಡಿಸಿ ಪೋಲಾಗುವ ಆಹಾರದ ಪ್ರಮಾಣ 80,500 ಟನ್‍ಗಳಾಷ್ಟದರೆ ಬಡಿಸದೆ ಪೋಲಾಗುವ ಆಹಾರದ ಪ್ರಮಾಣ ಸುಮಾರು 4,500 ಟನ್‍ಗಳಿಷ್ಟಿರಬಹುದು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಕಳೆದ 2011ರ ವರದಿ ಪ್ರಕಟಿಸಿದೆ.

ಈಗ ಇದರ ಪ್ರಮಾಣ ದುಪ್ಪಟ್ಟಾಗಿದೆ ಎಂದರೆ ತಪ್ಪಾಗಲಾರದು ಅನ್ನುತ್ತಾರೆ ಯುವರಾಜ್. ಲಯನ್ಸ್ ಸಂಸ್ಥೆಯ ಯುವ ಘಟಕವಾದ ಲಿಯೋದ ಬೆಂಗಳೂರು ಪಶ್ಚಿಮ ವಿಭಾಗದ ಅಧ್ಯಕ್ಷರಾದ ನಂತರ ಕಳೆದ 2 ವರ್ಷಗಳಿಂದ ಇವರು ಈ ಆಹಾರ ಜಾಗೃತಿ ಅಭಿಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಇದೇ 16 ರಂದು ವಿಶ್ವ ಆಹಾರ ದಿನಾಚರಣೆ ಆಚರಿಸಲಾಗುತ್ತಿದೆ, ಇದನ್ನು ಸರ್ಕಾರದ ಮಟ್ಟದಲ್ಲಿ ಆಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದರೆ ಆಹಾರದ ಪೋಲನ್ನು ಕಡಿಮೆ ಮಾಡಬಹುದಲ್ಲವೆ ಎಂಬುದು ಇವರ ಅಭಿಪ್ರಾಯ.

ಕೊಡಗಿನ ಎಂ.ಕೆ.ಮೋಹನ್‍ಕುಮಾರ್ ಅವರಿಂದ ಪ್ರೇರೇಪಿತರಾದ ಇವರು ಈ ಕಾರ್ಯದಲ್ಲಿ ತೊಡಗಿದ್ದಾರೆ. ಕಲ್ಯಾಣಮಂಟಪ ಹಾಗೂ ಇತರೆ ಶುಭ ಸಂದರ್ಭದಲ್ಲಿ ಆಹಾರ ಪದಾರ್ಥಗಳು ಉಳಿದರೆ ಇವರಿಗೆ ತಿಳಿಸಿದರೆ ಸಾಕು ಅವರೇ ಸ್ವತಃ ಬಂದು ಆಹಾರವನ್ನು ಪಡೆದುಕೊಂಡು ಗುಣಮಟ್ಟವನ್ನು ಪರೀಕ್ಷಿಸಿ ಮಧ್ಯಾಹ್ನವಾದರೆ ಕಟ್ಟಡ ಕಾರ್ಮಿಕರಿಗೆ ನೀಡುತ್ತಾರೆ, ಸಂಜೆಯಾದರೆ ರೈಲ್ವೆ ನಿಲ್ದಾಣದಲ್ಲಿರುವ ಜನರಿಗೆ ಹಂಚುವುದಲ್ಲದೆ ಕಲ್ಯಾಣಮಂಟಪ ಹಾಗೂ ದೇಗುಲಗಳಲ್ಲಿ ಆಹಾರ ಜಾಗೃತಿ ನಾಮಫಲಕಗಳನ್ನು ಅಳವಡಿಸುವ ಮೂಲಕ ಜನರಲ್ಲಿ ತಿಳುವಳಿಕೆ ಮೂಡಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ತಮ್ಮ ತಮ್ಮ ಪ್ರತಿಷ್ಠೆಗಾಗಿ ಮದುವೆ ಮನೆಗಳಲ್ಲಿ ನಾನಾ ಬಗೆಯ ಖಾದ್ಯಗಳನ್ನು ಮಾಡಿಸುತ್ತಾರೆ. ಇಷ್ಟೆಲ್ಲ ಆಹಾರವನ್ನು ಯಾರೂ ಸಹ ತಿನ್ನಲು ಸಾಧ್ಯವಿಲ್ಲ , ಕೆಲವೇ ತಿನ್ನುವಂತಹ ಹಾಗೂ ಹೊಟ್ಟೆ ತುಂಬುವಂತಹ ಆಹಾರ ತಯಾರಿಸಿ ಬಡಿಸಿದರೆ ಸಾಕಲ್ಲವೇ ಎಂಬುದೇ ಇವರ ಅನಿಸಿಕೆ.

ಕೆಲ ಅಡಿಗೆ ಗುತ್ತಿಗೆದಾರರು ಇವರ ಸಹಾಯವಾಣಿಯನ್ನು ಬಳಸಿಕೊಂಡು ಇಂತಹ ಕಲ್ಯಾಣಮಂಟಪದಲ್ಲಿ ಆಹಾರ ಉಳಿದಿದೆ ಎಂಬ ಮಾಹಿತಿ ನೀಡುತ್ತಾರೆ, ಕೂಡಲೇ ಅಲ್ಲಿಗೆ ಹೋಗಿ ಆಹಾರವನ್ನು ಪಡೆದುಕೊಳ್ಳುತ್ತಾರೆ, ಮಾರ್ಕೆಟಿಂಗ್ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಯುವರಾಜ ಬೀದಿ ನಾಟಕಗಳ ಮೂಲಕ ಜಾಗೃತಿಯನ್ನು ಮೂಡಿಸುತ್ತಾ ಅನ್ನವನ್ನು ಬಿಸಡಾದಿರಿ ರೈತರ ಬೆವರಿಗೆ ಬೆಲೆ ಕೊಡಿ ಎಂಬ ಸಂದೇಶವನ್ನು ಹಂಚುತ್ತಿದ್ದಾರೆ.
ಇವರ ಕೆಲವು ಬೇಡಿಕೆಗಳಿದ್ದು ಆಹಾರ ಸಂರಕ್ಷಣೆಗಾಗಿ ಆಹಾರ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕು, ಶಾಲಾ ಪಠ್ಯಪುಸ್ತಕದಲ್ಲಿ ಆಹಾರ ಸಂರಕ್ಷಣೆಯ ಬಗ್ಗೆ ವಿಷಯ ಅಳವಡಿಸಬೇಕು, ಪ್ರತಿ ವರ್ಷ ಅಕ್ಟೋಬರ್ 16 ರಂದು ಸರ್ಕಾರದಿಂದ ವಿಶ್ವ ಆಹಾರದಿನವನ್ನು ರಾಷ್ಟ್ರೀಯ, ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟಗಳು ಸೇರಿದಂತೆ ಶಾಲಾ , ಕಾಲೇಜುಗಳಲ್ಲಿ ಆಚರಿಸುವ ಮೂಲಕ ಆಹಾರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು.

ಹೀಗೆ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಇಂತಹ ಕಾರ್ಯದಲ್ಲಿ ತೊಡಗಿರುವ ಯುವರಾಜನಿಗೆ ನಮ್ಮೆಲ್ಲರ ಬೆಂಬಲವಿದ್ದರೆ ಆಹಾರ ಪೋಲಾಗುವುದನ್ನು ನಿಲ್ಲಿಸಬಹುದು. ಆಹಾರ ಈ ನಂಬರ್‍ಗೆ 8050802019 ಕರೆ ಮಾಡಿ.

Facebook Comments

Sri Raghav

Admin