ಕರ್ನಾಟಕ ಮುಕ್ತ ವಿವಿ ಮಾನ್ಯತೆಗೆ ಕೇಂದ್ರ ವಿಳಂಬ : ರಾಯರೆಡ್ಡಿ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

Basavaraja-Rayareddy

ಬೆಂಗಳೂರು,ಅ.9-ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ಯುಜಿಸಿ ನಿಯಮಗಳನ್ನು ಪಾಲನೆ ಮಾಡಿದ್ದರೂ ಕೂಡ ಮಾನ್ಯತೆ ಮುಂದುವರೆಸುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದ್ದು ರಾಜ್ಯದ ಮೂರುವರೆ ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು. ಇಂದು ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿವಿಯಲ್ಲಿನ ಭ್ರಷ್ಟಾಚಾರ, ಅವ್ಯವಹಾರ, ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ 2014ರಿಂದ 2016ರವರೆಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮಾನ್ಯತೆ ರದ್ದು ಮಾಡಲಾಗಿತ್ತು ಎಂದರು.

ಆದರೆ ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದೆ. ನಂತರ ಯುಜಿಸಿ ನಿಯಮಗಳನ್ನು ಅನುಸರಿಸಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಹೊರರಾಜ್ಯಗಳಲ್ಲಿ ಶಾಖೆ ಆರಂಭಿಸದಿರಲು ನಿಯಮಾವಳಿ ಮತ್ತು ಕಾನೂನುಗಳನ್ನು ಮಾಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ರಾಜ್ಯದ ಇತರ ಸಚಿವರೊಂದಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿದ್ದೇನೆ. ಅಲ್ಲದೆ ಎರಡು ಬಾರಿ ಪತ್ರಗಳನ್ನು ಬರೆದಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಪತ್ರ ಬರೆದಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಯುಜಿಸಿ ಅಧ್ಯಕ್ಷರನ್ನು ಭೇಟಿ ಮಾಡಲು ಹೋದರೆ ಅವರು ಅವಕಾಶವನ್ನೇ ನೀಡಲಿಲ್ಲ. ಹೀಗಾಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದ್ದರೂ ಮಾನ್ಯತೆಯನ್ನು ಮುಂದುವರೆಸುತ್ತಿಲ್ಲ. ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡಿದೆ. ಆದಾಗ್ಯೂ ಕೇಂದ್ರದ ಈ ವಿಳಂಬ ಧೋರಣೆ ಏಕೆ ಎಂಬುದು ಅರ್ಥವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ವಿಶ್ವವಿದ್ಯಾನಿಲಯದ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುವ ಅಧಿಕಾರವಿಲ್ಲ. ಅಲ್ಲಿ ಯಾವುದೇ ಅವ್ಯವಹಾರಗಳು ನಡೆದರೂ ತನಿಖೆಗೆ ಮುಂದಾಗುವಂತಿಲ್ಲ. ಈ ಹಿನ್ನೆಲೆಯಲ್ಲಿ ವಿವಿ ಸಮಗ್ರ ತಿದ್ದುಪಡಿ ಕಾಯ್ದೆ ರೂಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮುಚ್ಚುವ ಯಾವ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ. ಅಲ್ಲಿನ ಪರಿಸ್ಥಿತಿ ಅಧ್ಯಯನ ಮಾಡಿ ವರದಿ ನೀಡಲು ರಾಜ್ಯದ ಹೆಚ್ಚುವರಿ ಕಾರ್ಯದರ್ಶಿ ರತ್ನಪ್ರಭಾ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಹೇಳಿದರು.

ವಿವಿ ಹೆಸರಲ್ಲಿ 653 ಕೋಟಿ ರೂ. ಠೇವಣಿ ಇದೆ. ಅದರ ದುರುಪಯೋಗ ಆಗಬಾರದು. ಈ ಹಣದ ಬಡ್ಡಿಯಲ್ಲಿ ವಿವಿಯ 900 ಮಂದಿ ಸಿಬ್ಬಂದಿಗೆ ಮೂರು ವರ್ಷದಿಂದಲೂ ಪ್ರತಿ ವರ್ಷ 50 ಕೋಟಿ ರೂ.ಗಳನ್ನು ವೆಚ್ಚ ಮಾಡಿ ವೇತನ ಇತ್ಯಾದಿ ನೀಡಲಾಗುತ್ತಿದೆ. ಈ ಹಿಂದೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ 441 ಕೋಟಿ ರೂ.ಗಳನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿತು. ಅದನ್ನು ಮರಳಿ ಪಡೆಯಲು ನಾವು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ನಾಲ್ಕು ಬಾರಿ ಭೇಟಿ ಮಾಡಿದ್ದೇವೆ. ಆದರೂ ಹಣ ವಾಪಸ್ ಬಂದಿಲ್ಲ ಎಂದರು.

Facebook Comments

Sri Raghav

Admin