ಟೇಕ್ ಆಫ್ ಆಗದ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮ : ಹೈಕಮಾಂಡ್ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

Congress-01

ಬೆಂಗಳೂರು, ಅ.9-ಅದೇಕೋ ಕಾಂಗ್ರೆಸ್ ಪಕ್ಷ ಸಂಘಟನಾ ಚಟುವಟಿಕೆಗಳು ಟೇಕ್ ಆಫ್ ಆಗುವಂತೆ ಕಾಣುತ್ತಿಲ್ಲ. ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಮನೆ ಮನೆಗೆ ಕಾಂಗ್ರೆಸ್ ವಿನೂತನ ಕಾರ್ಯಕ್ರಮ ಅಷ್ಟಾಗಿ ಚುರುಕುಗೊಳ್ಳುತ್ತಿಲ್ಲದಿರುವುದರಿಂದ ಹೈಕಮಾಂಡ್ ಮತ್ತೆ ಗರಂ ಆಗಿದೆ.
ಪಕ್ಷದ ಉಸ್ತುವಾರಿ, ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಸೂಚನೆ ನಡುವೆಯೂ ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ಕಾರ್ಯಕ್ರಮವನ್ನು ನಿರ್ಲಕ್ಷಿಸುತ್ತಿರುವ ಮುಖಂಡರಿಂದ ಪಕ್ಷ ಸಂಘಟನೆಗೆ ಹಿನ್ನಡೆಯಾಗುತ್ತಿದೆ.

ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆ.ಸಿ.ವೇಣುಗೋಪಾಲ್ ಅವರು 66 ಸಾವಿರ ಬೂತ್‍ಗಳಲ್ಲಿ 6ಲಕ್ಷ ಕಾರ್ಯಕರ್ತರನ್ನು ನೇಮಿಸಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮವನ್ನು ತಲುಪಿಸುವುದರ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಿದ್ದರು.
ಶೇ.50ರಷ್ಟು ಫಲ ನೀಡದಿರುವುದು ಸಹಜವಾಗಿಯೇ ಇವರಿಗೆ ಬೇಸರ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಶಾಸಕಾಂಗ ಪಕ್ಷ ಸಭೆ ಹಾಗೂ ಪದಾಧಿಕಾರಿಗಳ ಸಭೆ ಕರೆದು ಚುರುಕು ಮುಟ್ಟಿಸಿದರೂ ಚಟುವಟಿಕೆಗಳು ಸಕ್ರಿಯವಾಗದ ಹಿನ್ನೆಲೆಯಲ್ಲಿ ಮತ್ತಷ್ಟು ಬೇಸರಗೊಂಡು ಸದ್ಯದಲ್ಲೇ ಮತ್ತೆ ಸಭೆ ಕರೆಯುವ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.

ಕೇವಲ ಸರ್ಕಾರದ ಕಾರ್ಯಕ್ರಮಗಳನ್ನು ನಂಬಿಕೊಂಡು ಚುನಾವಣೆಗೆ ತೆರಳಿದರೆ ಸಾಲದು, ಪ್ರತಿಯೊಂದು ಮನೆ ಮನೆಗೂ ನಾವು ತಲುಪಬೇಕು. ಕೇಂದ್ರ ಸರ್ಕಾರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ಮಾಡಬೇಕು. ನಿರ್ಲಕ್ಷ್ಯ ಧೋರಣೆಯನ್ನು ಕೈ ಬಿಟ್ಟು ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಹಳೆಯ ಶಿಷ್ಟಾಚಾರ, ಸಿದ್ದಾಂತಗಳನ್ನು ಬದಿಗೊತ್ತಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆಗಳನ್ನು ಜನರಿಗೆ ತಲುಪಿಸಲು ಮುಂದಾಗಬೇಕೆಂದು ವೇಣುಗೋಪಾಲ್ ತಿಳಿಸಿದ್ದಾರೆ.

ಪಕ್ಷದಲ್ಲಿ ಮುಖ್ಯಮಂತ್ರಿ ಪದವಿ ವಿವಾದವನ್ನು ಕೆದಕಬೇಡಿ. ಅದು ಹೈಕಮಾಂಡ್ ನಿರ್ಧರಿಸುತ್ತದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎಂದು ಕೆ.ಸಿ.ವೇಣುಗೋಪಾಲ್ ಸ್ಪಷ್ಟಪಡಿಸಿರುವುದು ಕೆಲವು ಸಿಎಂ ಆಕಾಂಕ್ಷಿಗಳಲ್ಲಿ ಅತೃಪ್ತಿ ತಂದಿದ್ದರೆ. ಸಿಎಂ ಬೆಂಬಲಿಗರಲ್ಲಿ ಖುಷಿ ತಂದಿದೆ.
ದೇವರಾಜು ಅರಸು ನಂತರ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ರಾಜಕೀಯ ಪರಿಸ್ಥಿತಿ ಉಂಟಾಗಿರುವುದು ಈಗಲೇ. ಇಂತಹ ಪರಿಸ್ಥಿತಿಯನ್ನು ನಾವು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ಈ ಮೂಲಕ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸಬೇಕು ಎಂಬ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ನಾಯಕರು ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ.

ವೇಣುಗೋಪಾಲ್ ಅವರು ಕೂಡ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ನಾಯಕರ ವರೆಗೆ ಎಲ್ಲರೊಂದಿಗೆ ವೈಯಕ್ತಿಕವಾಗಿ ಚರ್ಚಿಸಿ ಪಕ್ಷ ಸಂಘಟನೆ, ಅತೃಪ್ತಿ ನಿವಾರಣೆ ಮುಂತಾದ ವಿಷಯಗಳ ಕುರಿತು ಸಮಾಧಾನ ಪಡಿಸಿದ್ದಾರೆ.ಯಾವುದೇ ಹಂತದ ನಾಯಕರು ಪಕ್ಷದ ಬಗ್ಗೆ ಅಸಮಾಧಾನವಿದ್ದರೆ ನಿಮ್ಮ ಶಾಸಕರಾಗಲಿ, ಸಚಿವರಾಗಲಿ, ಕೆಪಿಸಿಸಿ ಅಧ್ಯಕ್ಷರ ಬಳಿ ಹೇಳಿಕೊಳ್ಳಲು ಆಗದಿದ್ದರೆ ನೇರವಾಗಿ ನನ್ನ ಬಳಿ ಬಂದು ತಿಳಿಸಿ. ನಾನೇ ಇತ್ಯರ್ಥ ಪಡಿಸುತ್ತೇನೆ. ಯಾವುದೇ ಕಾರಣಕ್ಕೂ ಬಹಿರಂಗವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಡಿ ಎಂದು ಕೂಡ ಸಲಹೆ ನೀಡಿದ್ದಾರೆ. 2್ಡ47 ಮಾದರಿಯಲ್ಲಿ ಕೆಲಸ ಮಾಡಬೇಕು. ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲ ಎಂಬ ಖಡಕ್ ಸೂಚನೆಯನ್ನು ನೀಡಿದ್ದಾರೆ.

Facebook Comments

Sri Raghav

Admin