ಪುರಪಿತೃಗಳ ನಡೆ ವಿಧಾನಸೌಧದ ಕಡೆ : ಟಿಕೆಟ್ ಗಾಗಿ ಮಾಜಿ ಮೇಯರ್, ಉಪಮೇಯರ್‍ಳ ಪೈಪೋಟಿ

ಈ ಸುದ್ದಿಯನ್ನು ಶೇರ್ ಮಾಡಿ

Vidhanasoudha

ಬೆಂಗಳೂರು, ಅ.9-ಬಿಬಿಎಂಪಿ ಪುರ ಪಿತೃಗಳ ಚಿತ್ತ ಮುಂಬರುವ ವಿಧಾನಸಭೆ ಚುನಾವಣೆಯತ್ತ ನೆಟ್ಟಿದೆ. 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ಹಾಲಿ ಮತ್ತು ಮಾಜಿ ಕಾರ್ಪೊರೇಟರ್ ಗಳು ಹಾಗೂ ಮೇಯರ್‍ಗಳು ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸಕ್ರಿಯವಾಗತೊಡಗಿದ್ದಾರೆ. ಹಾಲಿ ಬಿಬಿಎಂಪಿಯಲ್ಲಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನ 50ಕ್ಕೂ ಹೆಚ್ಚು ಸದಸ್ಯರು 28 ವಿಧಾನಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟು ಚುನಾವಣೆಗೆ ಟಿಕೆಟ್ ಪಡೆಯಲು ತಮ್ಮ ಗಾಡ್‍ಫಾದರ್‍ಗಳೊಂದಿಗೆ ಕಸರತ್ತು ನಡೆಸುತ್ತಿದ್ದಾರೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಮೇಯರ್ ಜಿ.ಪದ್ಮಾವತಿ ಪ್ರಯತ್ನಿಸುತ್ತಿದ್ದಾರೆ. ವಿಜಯನಗರ ಹಾಗೂ ಗೋವಿಂದರಾಜನಗರ ಕ್ಷೇತ್ರದಿಂದ ಮಾಜಿ ಮೇಯರ್ ಶಾಂತಕುಮಾರಿ, ಕಾರ್ಪೊರೇಟರ್ ಉಮೇಶ್‍ಶೆಟ್ಟಿ , ಎಚ್.ರವೀಂದ್ರ, ಲಕ್ಷ್ಮಿನಾರಾಯಣ್ ಸೇರಿದಂತೆ ಹಲವರು ಟಿಕೆಟ್‍ಪಡೆಯುವ ಪೈಪೋಟಿಗಿಳಿದಿದ್ದಾರೆ.

ಇತ್ತ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್, ಮಾಜಿ ಸದಸ್ಯ ಎಂ.ನಾಗರಾಜ್, ಹಾಲಿ ಸದಸ್ಯರಾದ ಎಂ.ಶಿವರಾಜ್ ಅವರು ಕಣಕ್ಕಿಳಿಯಲು ಕಸರತ್ತು ನಡೆಸಿದ್ದಾರೆ. ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಮಾಜಿ ಉಪಮೇಯರ್ ಎಂ.ಆನಂದ್ ತಮ್ಮ ಪಕ್ಷದ ಹೈಕಮಾಂಡ್ ಮನವೊಲಿಕೆಗೆ ಮುಂದಾಗಿದ್ದಾರೆ. ಇತ್ತ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಜಮೀರ್ ಅಹಮ್ಮದ್ ವಿರುದ್ಧ ಇಮ್ರಾನ್ ಪಾಷ, ಮಾಜಿ ಸದಸ್ಯ ಬಿ.ವಿ.ಗಣೇಶ್, ಬಿ.ಟಿ.ಶ್ರೀನಿವಾಸಮೂರ್ತಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಪ್ರಯತ್ನ ನಡೆಸಿದ್ದಾರೆ.

ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸದಸ್ಯ ಟಿ.ಮಲ್ಲೇಶ್, ಎಸ್.ಎಚ್.ಪದ್ಮರಾಜ್ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ.ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ  ಮಾಜಿ ಸದಸ್ಯರಾದ ಎನ್.ಆರ್.ರಮೇಶ್, ಪಿ.ಎನ್.ಸದಾಶಿವ, ಎ.ಎಲ್.ಶಿವಕುಮಾರ್, ಮಾಜಿ ಮೇಯರ್ ಎಸ್.ಕೆ.ನಟರಾಜ್ ಅವರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಪಕ್ಷದ ವರಿಷ್ಠರಿಗೆ ಮನವಿ ಸಲ್ಲಿಸಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಆರ್.ಪ್ರಕಾಶ್, ರಾಮಚಂದ್ರ, ಮಂಜುಳಾನಾರಾಯಣಸ್ವಾಮಿ ಮುಂತಾದವರು ಟಿಕೆಟ್ ಕೇಳುತ್ತಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಉಪಮೇಯರ್ ಎಲ್.ಶ್ರೀನಿವಾಸ್ ಆಕಾಂಕ್ಷಿಯಾಗಿದ್ದಾರೆ.  ಜಯನಗರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮೇಯರ್ ಮಂಜುನಾಥರೆಡ್ಡಿ, ಮಾಜಿ ಸದಸ್ಯ ಉದಯಶಂಕರ್, ಹಾಲಿ ಸದಸ್ಯ ಎನ್.ನಾಗರಾಜ್ ಅವರು ಅವಕಾಶ ಸಿಕ್ಕರೆ ವಿಧಾನಸಭೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ.

ಬಿಟಿಎಂ ಬಡಾವಣೆಯಿಂದ ದೇವದಾಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಸದಸ್ಯ ಗೌತಮ್, ಮಾಜಿ ಸದಸ್ಯರಾದ ಶ್ರೀಧರ್‍ರೆಡ್ಡಿ, ಗೀತಾ ಶ್ರೀನಿವಾಸ್‍ರೆಡ್ಡಿ ಸ್ಪರ್ಧಿಸಲು ಮುಂದಾಗಿದ್ದಾರೆ. ಬಸವನಗುಡಿ ಕ್ಷೇತ್ರದಲ್ಲಿ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಪ್ರಬಲ ಆಕಾಂಕ್ಷಿಯಾಗಿದ್ದು, ತಿಮ್ಮೇಗೌಡ ಕೂಡ ಸ್ಪರ್ಧಿಸಲು ಮುಂದಾಗಿದ್ದಾರೆ.

ಪದ್ಮನಾಭನಗರದಿಂದ ಚುನಾವಣಾ ಕಣಕ್ಕಿಳಿಯಲು ಮಾಜಿ ಮೇಯರ್ ವೆಂಕಟೇಶಮೂರ್ತಿ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾಲಿ ಆರ್.ಅಶೋಕ್ ಅವರ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ವೆಂಕಟೇಶ್ ಮೂರ್ತಿಯವರನ್ನು ಪಕ್ಷ ಯಾವ ರೀತಿ ಪರಿಗಣಿಸುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.  ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಗೋಪಿ ಹಾಗೂ ಪುಲಕೇಶಿ ನಗರಕ್ಕೆ ಹಾಲಿ ಮೇಯರ್ ಸಂಪತ್‍ರಾಜ್, ಜಾಕೀರ್ ಹುಸೇನ್ ಆಕಾಂಕ್ಷಿಗಳಾದರೆ, ಸರ್ವಜ್ಞ ನಗರದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಮತ್ತೊಮ್ಮೆ ಸ್ಪರ್ಧಿಸಲು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ತಯಾರಿ ನಡೆಸಿದ್ದಾರೆ.

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಪೂರ್ಣಿಮಾ ಶ್ರೀನಿವಾಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಹನುಮಂತೇಗೌಡ ಮತ್ತೊಮ್ಮೆ ಚುನಾವಣಾ ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ.   ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮೇಲೆ ಮಾಜಿ ಸದಸ್ಯ ತಿಮ್ಮನಂಜಯ್ಯ ಕಣ್ಣಿಟ್ಟಿದ್ದು, ಟಿಕೆಟ್ ಪಡೆಯುವ ಹರಸಾಹಸ ಮಾಡುತ್ತಿದ್ದಾರೆ.

Facebook Comments

Sri Raghav

Admin