ಅಯೋಧ್ಯೆಯಲ್ಲಿ ಬೃಹತ್ ರಾಮನ ಪ್ರತಿಮೆ ಸ್ಥಾಪನೆಗೆ ಯೋಗಿ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

Yogi--01

ಲಕ್ನೋ, ಅ.10-ಉತ್ತರಪ್ರದೇಶದ ಆಯೋಧ್ಯೆಯ ಸರಯು ನದಿ ತಟದಲ್ಲಿ 100 ಮೀಟರ್ ಎತ್ತರದ ಶ್ರೀರಾಮನ ಪ್ರತಿಮೆಯನ್ನು ಸ್ಥಾಪಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ. ಈ ಕುರಿತ ಪ್ರಸ್ತಾವನೆಯೊಂದನ್ನು ಈಗಾಗಲೇ ರಾಜ್ಯಪಾಲ ರಾಮ್ ನಾಯಕ್ ಅವರಿಗೆ ಸಲ್ಲಿಸಲಾಗಿದೆ.
ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಧಾರ್ಮಿಕ ಪ್ರವಾಸೋದ್ಯಮದ ಅನ್ವಯ ಹಾಗೂ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡುವ ಉದ್ದೇಶದೊಂದಿಗೆ ಈ ಬೃಹತ್ ಪುತ್ಥಳಿ ಸ್ಥಾಪಿಸಲು ಸಿದ್ದತೆಗಳು ನಡೆಯುತ್ತಿವೆ. ರಾಷ್ಟ್ರೀಯ ಹಸಿರು ಪೀಠ (ಎನ್‍ಜಿಟಿ) ಅನುಮತಿಯೊಂದಿಗೆ ಸರಯು ಘಾಟ್ ಪ್ರದೇಶದಲ್ಲಿ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ರಾಜ್ಯಪಾಲರ ಮುಂದೆ ಪ್ರಸ್ತುತಪಡಿಸಲಾದ ಸ್ಲೈಡ್ ಶೋನಲ್ಲಿ ಪ್ರತಿಮೆ ಎತ್ತರ 100 ಮೀಟರ್ ಇರಲಿದೆ ಎಂದು ತಿಳಿಸಲಾಗಿದೆ.

ದೀಪೋತ್ಸವ :

ಆಯೋಧ್ಯೆಯಲ್ಲಿ ಅಕ್ಟೋಬರ್ 18ರಿಂದ ಮೂರು ದಿನಗಳ ಕಾಲ ಸರ್ಕಾರದ ವತಿಯಿಂದ ವೈಭವದ ದೀಪಾವಳಿ ಆಚರಣೆಗೆ ಸಿದ್ದತೆಗಳು ನಡೆದಿದೆ. ಆಯೋಧ್ಯೆಯ ವಿವಾದಿತ ಸ್ಥಳದಿಂದ 2 ಕಿ.ಮೀ. ದೂರವಿರುವ ರಾಮ್ ಕಿ ಪೈದಿ ಎಂಬಲ್ಲಿ 1.71 ಲಕ್ಷ ದೀಪಗಳನ್ನು ಬೆಳಗಿಸುವ ಕಾರ್ಯಕ್ರಮವಿದೆ. ಶ್ರೀರಾಮ ಆಯೋಧ್ಯೆಗೆ ಆಗಮಿಸಿದ ದ್ಯೋತಕವಾಗಿ ಶೋಭಾ ಯಾತ್ರೆ ಮತ್ತು ಸಾಂಕೇತಿಕ ರಾಜ್ಯಾಭಿಷೇಖವೂ ನಡೆಯಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ ತಿಳಿಸಿದ್ದಾರೆ.

Facebook Comments

Sri Raghav

Admin