ಪರಿಷತ್ ಚುನಾವಣೆಗೆ ಪುತ್ರರತ್ನರನ್ನು ಕಣಕ್ಕಿಳಿಸಲು ಬಿಜೆಪಿ ಹಿರಿಯ ಕಟ್ಟಾಳುಗಳ ಪಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

BJP-Leaders-01

ಬೆಂಗಳೂರು, ಅ.10-ಮುಂದಿನ ವರ್ಷ ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿದ್ದು, ತೆರವಾಗಲಿರುವ ಸ್ಥಾನಕ್ಕೆ ತಮ್ಮ ಪುತ್ರರನ್ನೇ ಕಣಕ್ಕಿಳಿಸಲು ಹಿರಿಯ ಕಟ್ಟಾಳುಗಳು ಪಟ್ಟು ಹಿಡಿದಿದ್ದಾರೆ.2018ರ ಜೂನ್‍ನಲ್ಲಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಒಟ್ಟು 8 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಹಾಲಿ ಸಭಾಧ್ಯಕ್ಷರಾಗಿರುವ ಡಿ.ಎಚ್.ಶಂಕರಮೂತಿ, ಹಿರಿಯ ಸದಸ್ಯ ರಾಮಚಂದ್ರೇಗೌಡ ಹಾಗೂ ಗಣೇಶ್ ಕಾರ್ನಿಕ್ ಮತ್ತು ಅಮರ್‍ನಾಥ್‍ಪಾಟೀಲ್ ಅವರ ಅವಧಿ ಅಂತ್ಯಗೊಳ್ಳಲಿದೆ.

ಇದರಲ್ಲಿ ಡಿ.ಎಚ್.ಶಂಕರಮೂರ್ತಿ ಮತ್ತು ರಾಮಚಂದ್ರಗೌಡ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪುವ ಸಾಧ್ಯತೆ ನಿಶ್ಚಳವಾಗಿದೆ. ಈಗಾಗಲೇ ರಾಮಚಂದ್ರಗೌಡರು ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುವ ಸುಳಿವು ನೀಡಿದ್ದಾರೆ. ಬಿಜೆಪಿಯಲ್ಲಿ ತೆಗೆದುಕೊಂಡಿರುವ ತೀರ್ಮಾನದಂತೆ 75 ವರ್ಷ ದಾಟಿದವರಿಗೆ ಟಿಕೆಟ್ ನೀಡುವಂತಿಲ್ಲ. ಈಗಾಗಲೇ ಅನೇಕ ಮುಖಂಡರು ಚುನಾವಣೆಗೆ ಸ್ಪರ್ಧಿಸಿದ್ದರೂ ಅವರಿಗೆ ಪಕ್ಷದೊಳಗೆ ಯಾವುದೇ ರೀತಿಯ ಸ್ಥಾನಮಾನ ನೀಡಿಲ್ಲ. ಹೀಗಾಗಿ ಶಂಕರಮೂರ್ತಿ ಹಾಗೂ ರಾಮಚಂದ್ರಗೌಡ ಮುಂದಿನ ಚುನಾವಣೆಗೆ ಸ್ಪರ್ಧಿಸುವುದು ಅನುಮಾನ ಎನ್ನಲಾಗಿದೆ.

ಕೋರ್‍ಕಮಿಟಿಯಲ್ಲಿ ಚರ್ಚೆ:

ಮೇಲ್ಮನೆಯಿಂದ ತೆರವಾಗಲಿರುವ ನಾಲ್ಕು ಸ್ಥಾನಗಳಿಗೆ ಪಕ್ಷದ ವತಿಯಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬುದರ ಬಗ್ಗೆ ಇದೇ 13 ರಂದು ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯುವ ಸಂಭವವಿದೆ. ಅಂದು ನಡೆಯಲಿರುವ ಸಭೆಯಲ್ಲಿ ಮುಖ್ಯವಾಗಿ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಂಘಟಿಸುವುದು, ಅಭ್ಯರ್ಥಿಗಳ ಆಯ್ಕೆ, ವಿಸ್ತಾರಕ್ ವಿಸ್ತರಣೆ, ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ, ಕಾನೂನು ಸುವ್ಯವಸ್ಥೆ ಸೇರಿದಂತೆ ಮತ್ತಿತರ ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಲಿದೆ.

ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಸಹ ಉಸ್ತುವಾರಿ ಪಿಯೂಷ್ ಗೋಯಲ್ ಪಕ್ಷವನ್ನು ಸಂಘಟಿಸುವತ್ತ ತಿಳಿಹೇಳಿದ್ದರು. 13 ರಂದು ನಡೆಯಲಿರುವ ಕೋರ್‍ಕಮಿಟಿ ಸಭೆಯಲ್ಲಿ ಜನರ ಬಳಿ ಪಕ್ಷವನ್ನು ಕೊಂಡೊಯ್ಯಲು ಯಾವ ಯಾವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂಬುದರ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ.

ಹಲವು ಆಕಾಂಕ್ಷಿಗಳು:

ಬಿಜೆಪಿಯಿಂದ ತೆರವಾಗಲಿರುವ ನಾಲ್ಕು ಸ್ಥಾನಗಳಲ್ಲಿ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆದಿದೆ. ರಾಮಚಂದ್ರಗೌಡ ಅವರು ಸ್ಪರ್ಧಿಸುತ್ತಿದ್ದ ಬೆಂಗಳೂರು ಪದವೀಧರ ಕ್ಷೇತ್ರದಿಂದ ಬಿಜೆಪಿ ಯುವ ಮುಖಂಡ ಎ.ಎಚ್.ಆನಂದ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ರಾಮಚಂದ್ರಗೌಡ ಅವರು ತಮ್ಮ ಪುತ್ರ ಸಪ್ತಗಿರಿಗೌಡಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿಯದಿದ್ದರೆ ಆನಂದ್ ಸ್ಪರ್ಧೆಗೆ ದಾರಿ ಸುಗಮವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಡಿ.ಎಚ್.ಶಂಕರಮೂರ್ತಿ ಅವರು ಸ್ಪರ್ಧಿಸುತ್ತಿದ್ದ ನೈರುತ್ಯ ಕ್ಷೇತ್ರಕ್ಕೆ ರಾಜ್ಯಸಭೆಯ ಮಾಜಿ ಸದಸ್ಯ ಅಯನೂರು ಮಂಜುನಾಥ್, ಖಾಡಾ ಮಾಜಿ ಅಧ್ಯಕ್ಷ ಗಿರೀಶ್ ಪಾಟೀಲ್ ಹಾಗೂ ಶಂಕರಮೂರ್ತಿ ಅವರ ಪುತ್ರ ಡಿ.ಎಸ್.ಅರುಣ್ ಹೆಸರು ಚಾಲ್ತಿಯಲ್ಲಿದೆ. ತಮ್ಮ ಪುತ್ರನಿಗೆ ಟಿಕೆಟ್ ನೀಡುವುದಾದರೆ ತಾವು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ವರಿಷ್ಠರಿಗೆ ಶಂಕರಮೂರ್ತಿ ಹೇಳಿದ್ದಾರೆ ಎನ್ನಲಾಗಿದೆ. ಇನ್ನು ಇದೇ ಕ್ಷೇತ್ರದ ಮೇಲೆ ರಾಜ್ಯಸಭಾ ಮಾಜಿ ಸದಸ್ಯ ಆಯನೂರು ಮಂಜುನಾಥ್ ಕಣ್ಣಿಟ್ಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಶಿಷ್ಯನನ್ನೇ ಕಣಕ್ಕಿಳಿಸಲು ಒಲವು ತೋರಿದ್ದಾರೆ.
ಇತ್ತ ಸಂಘ ಪರಿವಾರದ ನಾಯಕರು ಇಬ್ಬರ ಬದಲು ಕಾಡಾ ಮಾಜಿ ಅಧ್ಯಕ್ಷ ಗಿರೀಶ್ ಪಾಟೀಲ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಹೀಗಾಗಿ ನೈರುತ್ಯ ಕ್ಷೇತ್ರ ಈ ಬಾರಿ ರಾಜಕೀಯವಾಗಿ ಹೆಚ್ಚು ಮಹತ್ವ ಪಡೆದುಕೊಂಡಿದೆ.

ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಪುನಃ ಹಾಲಿ ವಿಧಾನಪರಿಷತ್‍ನ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ನಿಕ್‍ಗೆ ಟಿಕೆಟ್ ಸಿಗುವುದು ಖಚಿತವಾಗಿದೆ. ವಾಯುವ್ಯ ಪದವೀಧರ ಕ್ಷೇತ್ರದಿಂದ ಅಮರನಾಥ್‍ಪಾಟೀಲ್ ಎರಡನೇ ಬಾರಿಗೆ ತಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ನಾಲ್ಕು ಸ್ಥಾನಗಳಿಗೆ ಈ ಬಾರಿ ಬಿಜೆಪಿಯಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.

Facebook Comments

Sri Raghav

Admin