‘ಭೂ’ಚಕ್ರಕ್ಕೆ ಸಿಲುಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು, ಅ.10-ನನ್ನ ಅಧಿಕಾರಾವಧಿಯಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘಿಸಿ ಡಿ ನೋಟಿಫಿಕೇಷನ್ ನಡೆಸಿಲ್ಲ ಎಂದು ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿ ಭೂಚಕ್ರಕ್ಕೆ ಸಿಲುಕಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಹೈಕೋರ್ಟ್‍ಗೆ ಮರೆಮಾಚಿ ಸುಮಾರು 300 ಕೋಟಿ ಬೆಲೆ ಬಾಳುವ ಜಮೀನನ್ನು ಸಿದ್ದರಾಮಯ್ಯ ತಮ್ಮ ಆಪ್ತರ ಹಿತಕಾಪಾಡಲು ಭೂಸ್ವಾಧೀನದಿಂದ ಕೈಬಿಟ್ಟಿರುವ ಹಗರಣವನ್ನು ಬಿಜೆಪಿ ಪತ್ತೆ ಹಚ್ಚಿದೆ.

ಬೆಂಗಳೂರು ಉತ್ತರ ತಾಲೂಕಿನ ಕಸಬಾ ಹೋಬಳಿ ಸರ್ವೆ ನಂಬರ್ 20 ರಲ್ಲಿ 3 ಎಕರೆ 24 ಗುಂಟೆ ಹಾಗೂ ಸರ್ವೆ ನಂಬರ್ 21 ರಲ್ಲಿ 2 ಎಕರೆ 32 ಗುಂಟೆ ಸೇರಿದಂತೆ 6 ಎಕರೆ ಜಮೀನಿನಲ್ಲಿ ಬಿಡಿಎ ಬಡಾವಣೆ ನಿರ್ಮಿಸಲು ಮುಂದಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕೀರ್ತಿ ರಾಜಶೇಖರಶೆಟ್ಟಿ ಎಂಬುವರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಭೂಸ್ವಾಧೀನದಿಂದ ಕೈಬಿಟ್ಟಿದ್ದಾರೆ. ಇದು 300 ಕೋಟಿ ಹಗರಣವಾಗಿದ್ದು, ಸಿದ್ದರಾಮಯ್ಯ ಬೇನಾಮಿ ಆಸ್ತಿ ಮಾಡುವ ಉದ್ದೇಶದಿಂದ ಭೂಸ್ವಾಧೀನದಿಂದ ಕೈಬಿಟ್ಟಿದ್ದಾರೆ. ನೈತಿಕ ಹೊಣೆ ಹೊತ್ತು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ.

ಪಕ್ಷದ ಕಚೇರಿಯಲ್ಲಿ ವಿಧಾನಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ, ಶಾಸಕರಾದ ಎಸ್.ಆರ್.ವಿಶ್ವನಾಥ್, ವೈ.ಎ.ನಾರಾಯಣಸ್ವಾಮಿ, ವಕ್ತಾರ ಮಧುಸೂದನ್ ಮತ್ತಿತರರು ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂಬ ಹಗರಣದ ಬಗ್ಗೆ ದಾಖಲೆ ಬಿಡುಗಡೆ ಮಾಡಿದರು. ಬಿ.ಜೆ.ಪುಟ್ಟಸ್ವಾಮಿ ಮಾತನಾಡಿ, ನಮ್ಮ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದರೆ ನಾನು ಎದುರಿಸಲು ಸಿದ್ಧನಿದ್ದೇನೆ. ಮಾನ, ಮರ್ಯಾದೆ ಇದ್ದರೆ ಮೊದಲು ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡುತ್ತಿದ್ದೇವೆ ಎನ್ನುವ ನೀವು ಮೊದಲು ಈ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟತೆ ನೀಡಿ ಎಂದು ಆಗ್ರಹಿಸಿದರು. ಸಿದ್ದರಾಮಯ್ಯ ನಡೆಸಿರುವ ಭೂಹಗರಣದ ಬಗ್ಗೆ ತನಿಖೆ ನಡೆಸುವಂತೆ ಎಸಿಬಿಗೆ ದೂರು ನೀಡಲಾಗುವುದು. ಒಂದು ವೇಳೆ ಎಸಿಬಿ ಯಾವುದೇ ಕ್ರಮಕೈಗೊಳ್ಳದಿದ್ದರೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ತಿಳಿಸಿದರು.

ಏನಿದು ಪ್ರಕರಣ:

ಬಿಡಿಎ ರಾಜ್‍ಮಹಲ್ ವಿಲಾಸ್ ಎರಡನೆ ಹಂತದಲ್ಲಿ ಒಟ್ಟು 6 ಎಕರೆ 26 ಗುಂಟೆ ಜಮೀನಿನಲ್ಲಿ ಬಡಾವಣೆ ನಿರ್ಮಿಸಲು 1978 ಜನವರಿ 19 ರಂದು ಪ್ರಾರಂಭಿಕ ಅಧಿಸೂಚನೆ ಹೊರಡಿಸಿತ್ತು. ನಂತರ 1982 ಡಿಸೆಂಬರ್ 28 ರಂದು ಅಂತಿಮ ಅಧಿಸೂಚನೆ ಹೊರಡಿಸಿ 1988 ನವೆಂಬರ್ 3 ರಂದು ರಾಜ್ಯಪತ್ರದಲ್ಲಿ ಸಹ ಪ್ರಕಟಿಸಲಾಗಿತ್ತು. ಸಯ್ಯದ್ ಬಾಶಿದ್, ಕೆ.ವಿ.ಜಯಲಕ್ಷ್ಮಮ್ಮ ಮತ್ತು ದೂಬಿಮುನಿಸ್ವಾಮಿ ಎಂಬುವರು ಈ ಜಮೀನಿನ ಮಾಲೀಕರಾಗಿದ್ದಾರೆ.

1992 ಆಗಸ್ಟ್ 27 ರಂದು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಜಮೀನುದಾರರ ಪರ ಸರ್ಕಾರ ಸದರಿ ಜಮೀನನ್ನು ಡಿ ನೋಟಿಫಿಕೇಶನ್ ಮಾಡಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಭೂ ಮಾಲೀಕರು ನ್ಯಾಯಾಲಯದ ಮೊರೆ ಹೋದರು.1996ರ ಅಕ್ಟೋಬರ್ 23 ರಂದು ಉಚ್ಚ ನ್ಯಾಯಾಲಯವು ಭೂಸ್ವಾಧೀನ ಹಿಂಪಡೆದಿರುವುದನ್ನು ರದ್ದುಪಡಿಸಿ ಆದೇಶ ಹೊರಡಿಸಿತು.  ಸಯ್ಯದ್‍ಬಾಶಿದ್ ಅವರು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದರು.

ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪು ಸರಿಯಾಗಿರುವುದರಿಂದ ಅರ್ಜಿಯನ್ನು ತಿರಸ್ಕರಿತೆಂದು ಪುಟ್ಟಸ್ವಾಮಿ ವಿವರಿಸಿದರು.  ಕೆ.ವಿ.ಜಯಲಕ್ಷ್ಮಮ್ಮ ಹೈಕೋರ್ಟ್‍ನಲ್ಲಿ ಭೂಸ್ವಾಧೀನ ರದ್ದುಪಡಿಸುವಂತೆ 2015ರ ನ.30 ರಂದು ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಿವೇಶನದಾರರ ಪರ ತೀರ್ಪು ನೀಡಿದ್ದವು ಎಂದು ಹೇಳಿದರು.

ಆದೇಶ ಉಲ್ಲಂಘನೆ:

ನ್ಯಾಯಾಲಯವು ಜಮೀನುದಾರರ ಪರ ತೀರ್ಪು ನೀಡಿದ್ದರೂ ಸಿದ್ದರಾಮಯ್ಯ ತಮ್ಮ ಆಪ್ತ ಕೀರ್ತಿರಾಜಶೇಖರಶೆಟ್ಟಿ ಎಂಬುವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇದನ್ನು ಭೂಸ್ವಾಧೀನದಿಂದ ಕೈಬಿಟ್ಟ ಕಾನೂನುಬಾಹಿರವಾಗಿ ಡಿ ನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿದರು.2015 , ಏ.17 ರಂದು ಬಿಡಿಎ ಕಾನೂನು ಘಟಕ ಸರ್ಕಾರಕ್ಕೆ ಪತ್ರವನ್ನು ಬರೆದು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲು ಸಾಧ್ಯವೇ ಇಲ್ಲ ಎಂದು ಹೇಳಿದೆ. ಆದರೂ ಸಿದ್ದರಾಮಯ್ಯ ಬಿಡಿಎ ಆಯುಕ್ತರಿಗೆ ಪರಿಶೀಲಿಸಬೇಕೆಂದು ಯಾವ ಕಾರಣಕ್ಕಾಗಿ ಪತ್ರ ಬರೆದರು ಎಂದು ಪುಟ್ಟಸ್ವಾಮಿ ಪ್ರಶ್ನಿಸಿದರು. ಇದು ಸಿದ್ದರಾಮಯ್ಯ ಅವರ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆಯಲ್ಲ, ಯಾವುದೇ ಮೊಕದ್ದಮೆ ಹೂಡಿದರೂ ಎದುರಿಸಲು ಸಿದ್ಧ. ನಿಮ್ಮ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂದು ಬಿ.ಜೆ.ಪುಟ್ಟಸ್ವಾಮಿ ಸವಾಲು ಹಾಕಿದರು.

Facebook Comments

Sri Raghav

Admin