ಹಗಲು ರಾತ್ರಿ ಕೆಲಸ ಮಾಡಿ ರಸ್ತೆಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ಮೇಯರ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Sampat-Kumar--01

ಬೆಂಗಳೂರು, ಅ.10- ರಸ್ತೆ ಗುಂಡಿ ಮುಚ್ಚಲು ಹಗಲು-ಇರಳು ಕೆಲಸ ಮಾಡಬೇಕು. ತಿಂಗಳಲ್ಲಿ ಎರಡು ಬಾರಿ ರಾತ್ರಿ ಪರಿಶೀಲನೆ ಮಾಡಬೇಕು. ಅಭಿವೃದ್ಧಿ ಕೆಲಸಗಳ ಪವರ್ ಪಾಯಿಂಟ್ ಪ್ರಸೆಂಟೇಶನ್ ನೀಡಬೇಕು. ರಸ್ತೆ ಬದಿ ಕಸ ಸುರಿಯುವವರ ಬಗ್ಗೆ ನಿಗಾ ಇಡಬೇಕು. ಇದು ಮೇಯರ್ ಸಂಪತ್‍ರಾಜ್ ಅಧಿಕಾರಿಗಳಿಗೆ ನೀಡಿದ ಕಟ್ಟುನಿಟ್ಟಿನ ಎಚ್ಚರಿಕೆಯ ಸೂಚನೆ.

ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಎಚ್ಚರಿಕೆ ನೀಡಿದರು. ಮಳೆಯಿಂದ ಹಾಳಾಗಿರುವ ರಸ್ತೆಗಳು, ಮಳೆ ಹಾನಿ ಪ್ರದೇಶಗಳು, ಕಸದ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆದ ನಂತರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇನ್ನು 7 ದಿನಗಳಲ್ಲಿ ಗುಂಡಿ ಮುಚ್ಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಹಾಗಾಗಿ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಬಾರದು. ಹಗಲು-ರಾತ್ರಿ ಕೆಲಸ ಮಾಡಿ ಎಂದು ಆದೇಶಿಸಿದರು.

ಇದೇ ಶುಕ್ರವಾರ ಹಿರಿಯ ಅಧಿಕಾರಿಗಳು ನೈಟ್ ರೌಂಡ್ಸ್ ಮಾಡಬೇಕು. ಯಾವ ರೀತಿ ಕೆಲಸ ನಡೆದಿದೆ. ಏನೇನು ಅಭಿವೃದ್ಧಿ ಆಗಿದೆ ಎಂಬ ಬಗ್ಗೆ ಪವರ್ ಪಾಯಿಂಟ್ ಮಾಡಿ ನನಗೆ ಕೊಡಿ. ಯಾವುದೇ ಕೆಟ್ಟ ಹೆಸರು ಬರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಆಯುಕ್ತ ಮಂಜುನಾಥ ಪ್ರಸಾದ್ ಮಾತನಾಡಿ, ಮಳೆ ಹಾನಿ ಮತ್ತು ರಸ್ತೆ ಗುಂಡಿ ಮುಚ್ಚುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಮೇಯರ್ ಜತೆ ವಲಯವಾರು ಸಭೆ ಆರಂಭಿಸಿದ್ದೇವೆ. ಇಂದು ಪೂರ್ವ ವಲಯಗಳ ಸಭೆ ಮಾಡಿದ್ದೇವೆ. ಮಧ್ಯಾಹ್ನ ಪಶ್ಚಿಮ ವಲಯದ ಅಧಿಕಾರಿಗಳ ಸಭೆ ಮಾಡುತ್ತೇವೆ ಎಂದು ತಿಳಿಸಿದರು. ಎಲ್ಲಾ ಎಂಟು ವಲಯಗಳ ಸಭೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Facebook Comments

Sri Raghav

Admin