ಕಾಶ್ಮೀರದಲ್ಲಿ ಭೀಕರ ಗುಂಡಿನ ಕಾಳಗ : 3 ಉಗ್ರರ ಹತ್ಯೆ, ಇಬ್ಬರು ಯೋಧರು ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

Encounter--01

ಶ್ರೀನಗರ, ಅ.11- ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿಗಳ ಉಪಟಳ ಗಮನಾರ್ಹವಾಗಿ ಕಡಿಮೆಯಾಗಿದೆ ಎಂಬ ಕೇಂದ್ರ ಸರ್ಕಾರದ ಹೇಳಿಕೆಗೆ ತದ್ವಿರುದ್ಧವಾಗಿ ಭಯೋತ್ಪಾದಕರ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದೆ. ಬಂಡಿಪೋರಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಉಗ್ರರೊಂದಿಗೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಎನ್‍ಕೌಂಟರ್‍ನಲ್ಲಿ ಮೂವರು ಲಷ್ಕರ್-ಇ-ತೈಬಾಆತಂಕವಾದಿಗಳನ್ನು ಸೈನಿಕರು ಹೊಡೆದುರುಳಿಸಿದ್ದಾರೆ.

ಉತ್ತರ ಕಾಶ್ಮೀರದ ಬಂಡಿಪೋರಾದ ಹಜಿನ್ ಪ್ರದೇಶದಲ್ಲಿ ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಭಾರತೀಯ ವಾಯು ಪಡೆಯ(ಐಎಎಫ್) ಇಬ್ಬರು ಸಿಬ್ಬಂದಿ ಹುತಾತ್ಮರಾಗಿದ್ದು, ಹಲವು ಯೋಧರು ಗಾಯಗೊಂಡಿದ್ದಾರೆ. ಭಯೋತ್ಪಾದಕರಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಯೋಧರು ಮೂವರನ್ನು ಹೊಡೆದುರುಳಿಸಿದ್ದಾರೆ. ಅಪಾರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಎಎಫ್ ಸಿಬ್ಬಂದಿ ಈ ಪ್ರದೇಶದಲ್ಲಿ ತರಬೇತಿಯಲ್ಲಿದ್ದಾಗ ಭಯೋತ್ಪಾದಕರು ದಾಳಿ ನಡೆಸಿದರು. ಮೊನ್ನೆ ತಾನೆ ನಡೆದ ಭಾರತೀಯ ವಾಯು ಪಡೆಯ 85ನೇ ವರ್ಷಾಚರಣೆಯಲ್ಲಿ ವಾಯು ಸೆಲೆಗಳು ಮತ್ತು ತರಬೇತಿ ಕೇಂದ್ರಗಳಿಗೆ ಬಿಗಿಭದ್ರತೆ ಒದಗಿಸಲಾಗುವುದು ಎಂದು ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಹೇಳಿದ್ದರು. ಅದರ ಬೆನ್ನಲ್ಲೇ ಐಎಎಫ್ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಉಗ್ರರು ಇಬ್ಬರು ಯೋಧರನ್ನು ಬಲಿ ಪಡೆದಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಇತ್ತೀಚಿನ ದಿನಗಳಲ್ಲಿ ಉಗ್ರರ ಉಪಟಳ ಹೆಚ್ಚಾಗುತ್ತಿದ್ದು, ಗುಂಡಿನ ದಾಳಿ, ಗ್ರೆನೇಡ್ ಆಕ್ರಮಣ, ಎನ್‍ಕೌಂಟರ್ ದಿನನಿತ್ಯದ ಸುದ್ದಿಯಾಗಿದೆ. ಸಿಆರ್‍ಪಿಎಫ್ ವಾಹನದ ಮೇಲೆ ದಾಳಿ : ಕಾಶ್ಮೀರದ ರಾಜಧಾನಿ ಶ್ರೀನಗರದ ಜನದಟ್ಟಣೆಯ ಸನತ್ ನಗರ್ ಚೌಕ್‍ನಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‍ಪಿಎಫ್) ವಾಹನದ ಮೇಲೆ ನಿನ್ನೆ ರಾತ್ರಿ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಕೆಲವು ಯೋಧರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಶೋಪಿಯನ್ ಜಿಲ್ಲೆಯ ಗತಿಪೋರಾ ಗ್ರಾಮದಲ್ಲಿ ಅಡಗಿದ್ದ ಉಗ್ರರು ಮತ್ತು ಯೋಧರ ನಡುವೆ ನಿನ್ನೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕರು ಹತರಾದರು.
ಕಣಿವೆ ರಾಜ್ಯದ ಬದಾಂ ಜಿಲ್ಲೆಯಲ್ಲಿ ಸೋಮವಾರ ನಡೆದ ಗುಂಡಿನ ಕಾಳಗದಲ್ಲಿ ಯೋಧರು ಜೈಷ್-ಎ-ಮೊಹಮದ್‍ನ ಟಾಪ್ ಕಮ್ಯಾಂಡರ್ ಉಮರ್ ಖಾಲಿದ್‍ನನ್ನು ಕೊಂದು ಹಾಕಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿದಿನ ಭದ್ರತಾಪಡೆಗಳು ಐದಾರು ಉಗ್ರರನ್ನು ಹೊಡೆದುರುಳಿಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಮೊನ್ನೆಯಷ್ಟೇ ಹೇಳಿಕೆ ನೀಡಿದ್ದರು.

Facebook Comments

Sri Raghav

Admin