ಪರಿವರ್ತನ ರಥಯಾತ್ರೆ ಉಸ್ತುವಾರಿ ಆರ್.ಅಶೋಕ್ ಹೆಗಲಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Ashok

ಬೆಂಗಳೂರು,ಅ.11-ನವೆಂಬರ್ 2ರಿಂದ ಬಿಜೆಪಿ ನಡೆಸಲು ಉದ್ದೇಶಿಸಿರುವ ಪರಿವರ್ತನ ರಥಯಾತ್ರೆ ಉಸ್ತುವಾರಿಯನ್ನು ಬಿಜೆಪಿ ಹಿರಿಯ ಮುಖಂಡ ಆರ್.ಅಶೋಕ್ ಹೆಗಲಿಗೆ ನೀಡಲಾಗಿದೆ.   ಈ ಹಿಂದೆ ಇದರ ಉಸ್ತುವಾರಿಯನ್ನು ಮಾಜಿ ಸಚಿವೆ ಹಾಲಿ ಸಂಸದೆ ಶೋಭಾ ಕರಂದ್ಲಾಜೆಗೆ ವಹಿಸಲಾಗಿತ್ತು. ಆದರೆ ಪಕ್ಷದ ವಲಯದಲ್ಲಿ ಅಪಸ್ವರ ಕೇಳಿಬಂದದ್ದರಿಂದ ಆರ್. ಅಶೋಕ್‍ಗೆ ಉಸ್ತುವಾರಿಯನ್ನು ನೀಡುವಂತೆ ವರಿಷ್ಠರು ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಆರ್‍ಎಸ್‍ಎಸ್ ನಾಯಕರ ಸೂಚನೆಯಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪರಿವರ್ತನ ರಥಯಾತ್ರೆಯ ಉಸ್ತುವಾರಿಯನ್ನು ಅಶೋಕ್‍ಗೆ ವಹಿಸಿದ್ದಾರೆ.   ಅ.2ರಂದು ಬೆಂಗಳೂರು ಇಲ್ಲವೇ ತುಮಕೂರಿನಿಂದ ರಥಯಾತ್ರೆ ಪ್ರಾರಂಭವಾಗಲಿದ್ದು , ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸುಮಾರು 75-80 ದಿನಗಳ ಕಾಲ ಸಂಚರಿಸಲಿದೆ.

ಕೇಂದ್ರ ಸರ್ಕಾರದ ಸಾಧನೆಗಳು, ರಾಜ್ಯ ಸರ್ಕಾರದ ವೈಫಲ್ಯಗಳು, ಕುಸಿದು ಬಿದ್ದಿರುವ ಕಾನೂನು ಸುವ್ಯವಸ್ಥೆ, ಮಹಿಳೆಯರ ಮೇಲೆ ಹಲ್ಲೆ, ಅತ್ಯಾಚಾರ, ಭ್ರಷ್ಟಾಚಾರ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಜನತೆಯ ಬಳಿ ಕೊಂಡೊಯ್ಯುವುದೇ ಪರಿವರ್ತನ ರಥಯಾತ್ರೆಯ ಮುಖ್ಯ ಉದ್ದೇಶ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಕೇಂದ್ರ ಸಚಿವರು ಪರಿವರ್ತನ ರಥಯಾತ್ರೆಗೆ ಆಗಮಿಸಲಿದ್ದು , ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ.

ಈಗಾಗಲೇ ಪರಿವರ್ತನಾ ರಥಯಾತ್ರೆಗೆ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಯಡಿಯೂರಪ್ಪ ಜೊತೆ ಆರ್.ಅಶೋಕ್, ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ , ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ ಸೇರಿದಂತೆ ಪಕ್ಷದ ಮುಖಂಡರು, ಶಾಸಕರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಪರಿವರ್ತನ ರಥಯಾತ್ರೆ ಆಗಮಿಸಲಿರುವುದರಿಂದ ತಾಲ್ಲೂಕು ಹಾಗೂ ಹೋಬಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಕ್ಷ ಕಾರ್ಯಕರ್ತರನ್ನು ಕರೆತರುವಂತೆ ಸೂಚಿಸಲಾಗಿದೆ. ಈಗಾಗಲೇ ವಿಸ್ತಾರಕ್ ಕಾರ್ಯಕ್ರಮದ ಮೂಲಕ ಬಿಜೆಪಿ ಮನೆ ಮನೆ ತಲುಪಿದೆ. ಇದೀಗ ಪರಿವರ್ತನ ಯಾತ್ರೆ ಮೂಲಕ ವಿಧಾನಸಭೆ ಚುನಾವಣೆಗೆ ರಣ ಕಹಳೆ ಮೊಳಗಿಸಲಿದೆ.

Facebook Comments

Sri Raghav

Admin