ಸಂಯಮದಿಂದ ವರ್ತಿಸಲು ಶಾಸಕರಿಗೆ ಸಿಎಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-01

ಬೆಂಗಳೂರು,ಅ.11-ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನಕಾದರ್ಶಿ ರಾಜೇಂದ್ರ ಕಠಾರಿಯಾ ಅವರಿಗೆ ಶಾಸಕ ಶಿವಮೂರ್ತಿ ನಾಯಕ್ ಬೆದರಿಕೆ ಹಾಕಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಸಚಿವರುಗಳಿಂದ ಪರ-ವಿರೋಧ ಹೇಳಿಕೆಗಳು ಕೇಳಿ ಬಂದಿವೆ. ಇಂಹತ ವರ್ತನೆ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರಿಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ.  ಸಚಿವ ಸಂಪುಟಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರೊಂದಿಗೆ ಮಾತನಾಡಿದ ಸಿಎಂ, ರಾಜೇಂದ್ರ ಕಠಾರಿಯಾ ಅವರು ಬರೆದಿರುವ ಪತ್ರ ನಮಗೆ ಬಂದಿಲ್ಲ. ಅದು ಬಂದ ಮೇಲೆ ಗಮನಿಸುತ್ತೇನೆ. ಆದರೆ, ಶಾಸಕ ಶಿವಮೂರ್ತಿ ನಾಯಕ್ ಅವರು ಇಂತಹ ವರ್ತನೆ ಮಾಡಬಾರದು ಎಂದು ಗಂಭೀರ ಸಲಹೆ ನೀಡುವುದಾಗಿ ಹೇಳಿದರು.

ಹಿರಿಯ ಸಚಿವ ಕಾಗೋಡು ತಿಮ್ಮಪ್ಪ ಅವರು, ಶಾಸಕ ಶಿವಮೂರ್ತಿ ನಾಯಕ್ ವಿರುದ್ಧ ಪೊಲೀರಸರಿಗೆ ದೂರು ನೀಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಸದ್ಯಕ್ಕೆ ಸಚಿವಸಂಪುಟಸಭೆ ನಡೆಯುತ್ತಿದೆ. ಬೆದರಿಕೆಗೆ ಒಳಗಾಗಿರುವ ಅಧಿಕಾರಿ ಮೊದಲು ಪೊಲೀಸರಿಗೆ ದೂರು ನೀಡಲಿ. ನಂತರ ನಾನು ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಶಿವಮೂರ್ತಿ ನಾಯಕ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಜನತಂತ್ರ ವ್ಯವಸ್ಥೆಯಲ್ಲಿಶಾಸಕರಿಗೆ ಜವಾಬ್ದಾರಿ ಇರುತ್ತದೆ. ಕೆಲಸ ನಿರ್ವಹಿಸುವ ವೇಳೆ ಇತಿಮಿತಿಗಳನ್ನು ಹಾಕಿಕೊಳ್ಳಬೇಕು. ಶಾಸಕರ ಕೆಲಸಗಳಿಗೆ ಅಧಿಕಾರಿಗಳು ವಿಳಂಬ ಮಾಡಬಾರದು. ಈ ವಿಳಂಬದಿಂದ ಬಹುಶಃ ಶಾಸಕರಿಗೆ ಕೋಪ ಬಂದಿರಬಹುದು. ಕಠಾರಿಯ ಒಬ್ಬ ಹಿರಿಯ ಅಧಿಕಾರಿ. ಮೊದಲು ಅವರು ದೂರು ನೀಡಲಿ. ನಂತರ ಮುಂದಿನ ಕ್ರಮಗಳ ಬಗ್ಗೆ ಯೋಚಿಸುತ್ತೇವೆ ಎಂದರು.

ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಶಾಸಕರು ಮತ್ತು ಅಧಿಕಾರಿ ನಡುವೆ ಯಾವ ಕಾರಣಕ್ಕೆ ವೈಮನಸ್ಸು ಬಂದಿದೆ ಎಂಬುದು ಗೊತ್ತಿಲ್ಲ. ಶಾಸಕರಿಂದ ತೊಂದರೆಯಾಗುತ್ತಿದೆ ಎಂದು ದೂರು ನೀಡಿರುವುದು ನಿಜ. ದೂರನ್ನು ಪರಿಶೀಲಿಸುತ್ತೇನೆ. ನಂತರ ಸಿದ್ದರಾಮಯ್ಯ ಅವರ ಜತೆ ಚರ್ಚಿಸುತ್ತೇನೆ ಎಂದು ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಈ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶೀಲಿಸಬೇಕು. ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಸಿಎಂ ಬಳಿ ಇದೆ. ಈ ದೂರಿನ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಸರ್ಕಾರದ ಮುಖ್ಯಕಾರ್ಯದರ್ಸಿ ಸುಬಾಷ್ ಚಂದ್ರ ಕುಂಠಿಆ ಪ್ರತಿಕ್ರಿಯೆ ನೀಡಿ, ಇದೊಂದು ಗಂಭೀರ ಪ್ರಕರಣ, ಇಂತಹ ಘಟನೆಗಳು ನಡೆಯಬಾರದು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ದೂರಿನ ಬಗ್ಗೆ ಮತ್ತಷ್ಟು ಪರಿಶೀಲನೆಗಳು ನಡೆಯುತ್ತಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಧಾನಸಭೆಗೆ ಆಗಮಿಸಿದ ರಾಜೇಂದ್ರ ಕಠಾರಿಯಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಆದರೂ ಪಟ್ಟು ಬಿಡದೆ ಮಾಧ್ಯಮಗಳು ಬೆನ್ನಟ್ಟಿದಾಗ. ಅಕ್ಷರಶಃ ಕಠಾರಿಯಾ ಅಲ್ಲಿಂದ ಓಟ ಕಿತ್ತರು.

Facebook Comments

Sri Raghav

Admin