35 ಅಕ್ರಮ ದೂರವಾಣಿ ವಿನಿಮಯ ಜಾಲ ಪತ್ತೆ, 26 ಮಂದಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Phone-Thrat

ಥಾಣೆ, ಅ.11-ಮಹಾರಾಷ್ಟ್ರದ ಥಾಣೆಯ ಭೀವಂಡಿ ಉಪನಗರದ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದ ಪೊಲೀಸರು, 35 ಅಕ್ರಮ ವಿಒಐಪಿ (ವಾಯ್ಸ್ ಓವರ್ ಇಂಟರ್ ನೆಟ್ ಪ್ರೊಟೊಕಾಲ್) ದೂರವಾಣಿ ವಿನಿಮಯ ಜಾಲವನ್ನು ಪತ್ತೆ ಮಾಡಿ 26ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಿಂದಾಗಿ ಹಫ್ತಾ ವಸೂಲಿ ದಂಧೆ ಬಗ್ಗೆಯೂ ಸುಳಿವು ದೊರೆತಿದ್ದು, ಮತ್ತಷ್ಟು ಆರೋಪಿಗಳು ಬಂಧನಕ್ಕೊಳಗಾಗುವ ಸಾಧ್ಯತೆ ಇದೆ. ಹಲವೆಡೆ ನಿನ್ನೆಯಿಂದ ಮಧ್ಯರಾತ್ರಿ ತನಕ ನಡೆದ ಕ್ಷಿಪ್ರ ಕಾರ್ಯಾಚರಣೆ ವೇಳೆ ಅಕ್ರಮ ಟೆಲಿಫೋನ್ ಎಕ್ಸ್‍ಚೇಂಜ್‍ಗಾಗಿ ಬಳಸುತ್ತಿದ್ದ ಅನೇಕ ಅತ್ಯಾಧುನಿಕ ಗ್ಯಾಡ್ಜೆಟ್‍ಗಳು ಮತ್ತು ಇತರ ಸಾಧನ-ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಫ್ತಾ ವಸೂಲಿಗಾಗಿ ಬರುತ್ತಿದ್ದ ಬೆದರಿಕೆ ಕರೆಗಳ ಬಗ್ಗೆ ನೀಡಲಾದ ದೂರು ಆಧರಿಸಿ ಕಾರ್ಯಾಚರಣೆಗೆ ಇಳಿದ ಥಾಣೆ ಅಪರಾಧ ನಿಗ್ರಹ ದಳದ ಪೊಲೀಸರಿಗೆ ಓಡಿಶಾದಿಂದ ಬಂದ ಕರೆ ಬಗ್ಗೆ ಸುಳಿವು ಲಭಿಸಿ ತನಿಖೆ ತೀವ್ರಗೊಳಿಸಿದಾಗ ಭೀವಂಡಿ ಮೂಲಕ ಕರೆಗಳು ಹಾದು ಹೋಗಿರುವುದು ಬೆಳಕಿಗೆ ಬಂದಿತ್ತು. ದಾಳಿ ನಡೆಸಿದಾಗ ಈ ಪ್ರದೇಶವು ಅಕ್ರಮ ದೂರವಾಣಿ ವಿನಿಮಯ ತಾಣ ಎಂಬ ಆತಂಕಕಾರಿ ಸಂಗತಿ ಬಯಲಾಯಿತು ಎಂದು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯುಎಇ, ಮಧ್ಯಪ್ರಾಚ್ಯ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಈ ಕರೆಗಳನ್ನು ಸ್ವೀಕರಿಸಲಾಗುತ್ತಿತ್ತು. ಕರೆ ಮಾಡುವವರ ಗುರುತನ್ನು ಬಹಿರಂಗಗೊಳಿಸದ ಅತ್ಯಾಧುನಿಕ ಗ್ಯಾಡ್ಜೆಟ್‍ಗಳನ್ನು ಇದಕ್ಕಾಗಿ ಬಳಸಲಾಗುತ್ತಿತ್ತು. ಇದೊಂದು ಅತ್ಯಂತ ವ್ಯವಸ್ಥಿತ ಜಾಲವಾಗಿದ್ದು, ಭೂಗತಲೋಕದ ಪಾತಕಿಗಳು ಮತ್ತು ಹಫ್ತಾ ವಸೂಲಿಗಾಗಿ ಧಮಕಿ ಹಾಕುವ ರೌಡಿಗಳೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಸಾಕ್ಷ್ಯಾಧಾರಗಳು ಲಭಿಸಿವೆ.

Facebook Comments

Sri Raghav

Admin