ಡಿಜಿ ಸ್ಥಾನಕ್ಕಾಗಿ ಭಾರೀ ಲಾಬಿ : ಎಂ.ಎನ್.ರೆಡ್ಡಿ – ಕಿಶೋರ್‍ಚಂದ್ರ ನಡುವೆ ಪೈಪೋಟಿ

ಈ ಸುದ್ದಿಯನ್ನು ಶೇರ್ ಮಾಡಿ

MN-Reddy-n-01

ಬೆಂಗಳೂರು,ಅ.12-ಇದೇ ತಿಂಗಳ 31ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪ್ ಕುಮಾರ್ ದತ್ತ ಅವರು ಸೇವೆಯಿಂದ ನಿವೃತ್ತಿಯಾಗಲಿದ್ದು , ತೆರವಾಗಲಿರುವ ಈ ಸ್ಥಾನಕ್ಕೆ ಭಾರೀ ಲಾಭಿ ಆರಂಭವಾಗಿದೆ. ರೂಪ್‍ಕುಮಾರ್ ದತ್ತ ನಿವೃತ್ತಿಯಾದರೆ ಸದ್ಯಕ್ಕೆ ಈ ಹುದ್ದೆಗೆ ಮುಖ್ಯವಾಗಿ ಹಿರಿಯ ಐಪಿಎಸ್ ಅಧಿಕಾರಿಗಳಾದ ನೀಲಮಣಿ ಎನ್.ರಾಜು, ಕಿಶೋರ್ ಚಂದ್ರ ಹಾಗೂ ಎಂ.ಎನ್.ರೆಡ್ಡಿ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತವೆ.

ಒಂದು ವೇಳೆ ಹಾಲಿ ಗೃಹ ರಕ್ಷಕ ದಳ ಅಗ್ನಿ ಮತ್ತು ತುರ್ತು ಸೇವೆಯ ಡಿಜಿಪಿ ನೀಲಮಣಿ ಎನ್.ರಾಜು ಅವರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೃಪಾಕಟಾಕ್ಷ ತೋರಿದರೆ ರಾಜ್ಯದ ಮೊದಲ ಮಹಿಳಾ ಡಿಜಿಯಾದ ಕೀರ್ತಿ ಅವರಿಗೆ ಸಲ್ಲುತ್ತದೆ.

ರೇಸ್‍ನಲ್ಲಿ ಯಾರು:

ಆರ್.ಕೆ.ದತ್ತ ನಿವೃತ್ತಿಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಡಿಜಿ ಹುದ್ದೆಗೆ ಸರ್ಕಾರದ ಮಟ್ಟದಲ್ಲಿ ಐಪಿಎಸ್ ಅಧಿಕಾರಿಗಳು ತಮ್ಮ ತಮ್ಮ ಗಾಡಫಾದರ್‍ಗಳ ಮೂಲಕ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯನವರು ಈ ಉನ್ನತ ಹುದ್ದೆಗೆ ಯಾರನ್ನು ಪರಿಗಣಿಸಬೇಕೆಂದು ಈವರೆಗೂ ಯಾವುದೇ ರೀತಿಯ ತೀರ್ಮಾನ ಕೈಗೊಂಡಿಲ್ಲ. ಮೂಲಗಳ ಪ್ರಕಾರ ಮುಂದಿನ ವಾರ ಗೃಹ ಸಚಿವರು, ಗೃಹ ಇಲಾಖೆ ಕಾರ್ಯದರ್ಶಿ ಸೇರಿದಂತೆ ಕೆಲವು ಹಿರಿಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಸಂಭವವಿದೆ.

ಸೇವಾ ಹಿರಿತನದಲ್ಲಿ ನೀಲಮಣಿ ಎನ್.ರಾಜು ಅವರು ಮುಂಚೂಣಿಯಲ್ಲಿದ್ದಾರೆ. 1983ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ಅವರಿಗೆ ಎಸಿಬಿ ಡಿಜಿಪಿ ಎಂ.ಎನ್.ರೆಡ್ಡಿ ಮತ್ತು ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಪ್ರಬಲ ಸ್ಪರ್ಧಿಗಳಾಗಿದ್ದಾರೆ. ಇದರಲ್ಲಿ ಕಿಶೋರ್ ಚಂದ್ರ ಮತ್ತು ಎಂ.ಎನ್.ರೆಡ್ಡಿ 1984ರ ಐಪಿಎಸ್ ಬ್ಯಾಚ್‍ನ ಅಧಿಕಾರಿಗಳಾಗಿದ್ದಾರೆ.

ನೀಲಮಣಿ ಅವರು ಕಳೆದ 20 ವರ್ಷಗಳಿಂದ ಕೇಂದ್ರ ಸೇವೆಯಲ್ಲಿದ್ದರು. ಇತ್ತೀಚೆಗಷ್ಟೇ ಅವರುರಾಜ್ಯಕ್ಕೆ ಮರಳಿದ್ದರು. ಇನ್ನು ಎಂ.ಎನ್.ರೆಡ್ಡಿ ಆಂಧ್ರಪ್ರದೇಶದವರಾದರೆ ಹಾಗೂ ಕಿಶೋರ್‍ಚಂದ್ರ ಕರ್ನಾಟಕದವರು. ನೀಲಮಣಿ ಉತ್ತರಪ್ರದೇಶದವರಾಗಿದ್ದರೆ ,ಎಂ.ಎನ್.ರೆಡ್ಡಿ ಕೂಡ ಆಂಧ್ರಪ್ರದೇಶದಿಂದ ಬಂದವರು. ಸಾಮಾನ್ಯವಾಗಿ ಡಿಜಿ ಹುದ್ದೆಯನ್ನು ಸ್ಥಳೀಯರಿಗೆ ನೀಡಿದರೆ ಕಾನೂನು ಸುವ್ಯವಸ್ಥೆ ಸೇರಿದಂತೆ ಗೃಹ ಇಲಾಖೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸ ಸಾರ್ವಜನಿಕರಲ್ಲಿದೆ.

ಯಾವುದೇ ಒಬ್ಬ ಅಧಿಕಾರಿ ಇಂತಹ ಉನ್ನತ ಹುದ್ದೆಗೆ ಬರಬೇಕಾದರೆ ಮೊದಲು ರಾಜ್ಯದ ಸ್ಥಿತಿಗತಿಯನ್ನು ಅರಿತಿರಬೇಕು. ಹೀಗಾಗಿ ನೀಲಮಣಿ ರಾಜು ಅವರಿಗೆ ಕೊನೆ ಕ್ಷಣದಲ್ಲಿ ಈ ಹುದ್ದೆ ಕೈ ತಪ್ಪಿದರೂ ಅಚ್ಚರಿ ಇಲ್ಲ. ಕಿಶೋರ್ ಚಂದ್ರ ಈಗಲೂ ಸರ್ಕಾರಿ ಮಟ್ಟದಲ್ಲಿ ಸಾಕಷ್ಟು ಪ್ರಭಾವ ಇಟ್ಟುಕೊಂಡಿದ್ದಾರೆ. ಅಲ್ಲದೆ ಅವರ ಮೇಲೆ ಯಾವುದೇ ರೀತಿಯ ಗುರುತರ ಆರೋಪಗಳಿಲ್ಲ.  ಇದೇ ರೀತಿ ಎಂ.ಎನ್.ರೆಡ್ಡಿ ಕೂಡ ಎಲ್ಲರ ಜೊತೆ ಹೊಂದಿಕೊಂಡು ಹೋಗುವ ಗುಣದವರು. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ವೇಳೆ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡು ಕಾನೂನು ಸುವ್ಯವಸ್ಥೆ ರಕ್ಷಣೆ, ರೌಡಿಗಳ ನಿಯಂತ್ರಣ, ಮಹಿಳೆಯರಿಗೆ ರಕ್ಷಣೆ, ಮಕ್ಕಳ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಸೇರಿದಂತೆ ಹತ್ತು ಹಲವು ಪ್ರಕರಣಗಳನ್ನು ಕೈಗೊಂಡು ಸಾರ್ವಜನಿಕರ ಪ್ರಶಂಸೆಗೆ ಕಾರಣರಾಗಿದ್ದರು.

ಸರ್ಕಾರದ ಉನ್ನತ ಮೂಲಗಳ ಪ್ರಕಾರ ಕಿಶೋರ್‍ಚಂದ್ರ ಡಿಜಿ ಹುದ್ದೆ ಅಲಂಕರಿಸುವ ಸಂಭವವೇ ಹೆಚ್ಚಾಗಿದೆ ಜೊತೆಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರೂರು ಮೈಸೂರಿನವರು.  ಗೃಹ ಇಲಾಖೆಯಲ್ಲಿ ಡಿಜಿ ಹುದ್ದೆ ಅತ್ಯಂತ ಪ್ರಬಲ ಹುದ್ದೆಯಾಗಿದ್ದು ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚರಿಕೆಯಿಂದ ಆಯ್ಕೆ ಮಾಡಲು ಮುಂದಾ ಗಿದೆ.  ನಿಷ್ಪಕ್ಷಪಾತವಾಗಿ ಕೆಲಸ ಮಾಡದಿದ್ದರೆ ಪ್ರತಿಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡುವ ಸಾಧ್ಯತೆ ಹೆಚ್ಚಾಗಿರುತ್ತದೆ.ಇದರಿಂದ ಸರ್ಕಾರ ಮುಜುಗರಕ್ಕೆ ಸಿಲುಕುತ್ತದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಯಾವುದೇ ಅಪಸ್ವರ ಇಲ್ಲದಂತೆ ಎಚ್ಚರಿಕೆಯಿಂದ ಎಲ್ಲರೂ ಒಪ್ಪುವಂತಹ ವ್ಯಕ್ತಿಯನ್ನೇ ಡಿಜಿ ಹುದ್ದೆಗೆ ಆಯ್ಕೆ ಮಾಡಲು ಗಮನ ನೀಡಿದ್ದಾರೆ.

Facebook Comments

Sri Raghav

Admin