ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟ, ಶೋಭಾ ಕರಂದ್ಲಾಜೆ ಕಾರಣರಾದರೇ..?

ಈ ಸುದ್ದಿಯನ್ನು ಶೇರ್ ಮಾಡಿ

BJP-Shobha

ಬೆಂಗಳೂರು,ಅ.12-ಬಿಜೆಪಿಯೊಳಗಿನ ಬೂದಿ ಮುಚ್ಚಿದ ಕೆಂಡದಂತಿರುವ ಭಿನ್ನಮತ ಮತ್ತೆ ಸ್ಫೋಟಗೊಂಡಿದೆ. ಎಲ್ಲವೂ ಬಗೆಹರಿದು ಇನ್ನೇನಿದ್ದರೂ ಪಕ್ಷ ಸಂಘಟನೆಯೇ ನಮ್ಮ ಮುಖ್ಯ ಗುರಿ ಎಂದು ಹೇಳುತ್ತಿದ್ದ ಕಮಲ ಕಲಹ ಪುನಃ ಬೀದಿಗೆ ಬಂದಿದೆ. ಪ್ರಚಾರ ಸಮಿತಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುನರ್ ರಚನೆ ಮಾಡಿರುವುದೇ ಈ ಭಿನ್ನಮತಕ್ಕೆ ಕಾರಣ ಎನ್ನಲಾಗಿದೆ. ಕೇಂದ್ರ ಸಚಿವ ಸದಾನಂದಗೌಡ ಅವರನ್ನು ಪ್ರಚಾರ ಸಮಿತಿ ಸ್ಥಾನದಿಂದ ಕೈಬಿಟ್ಟು ಯಡಿಯೂರಪ್ಪನವರೇ ಈ ಸಮಿತಿಗೆ ಅಧ್ಯಕ್ಷರಾಗಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಸಂಚಾಲಕಿಯಾಗಿದ್ದರೆ ಡಿವಿಎಸ್‍ಗೆ 4ನೇ ಸ್ಥಾನ ನೀಡಿರುವುದು ಅವರ ಕಣ್ಣು ಕೆಂಪಾಗುವಂತೆ ಮಾಡಿದೆ.

ಪ್ರಚಾರ ಸಮಿತಿ ಪುನರ್ ರಚನೆ ವೇಳೆ ಮುಖ್ಯಸ್ಥರಾಗಿ ಯಡಿಯೂರಪ್ಪ , ಶೋಭಾ ಕರಂದ್ಲಾಜೆ ಇರುವುದಕ್ಕೆ ಪಕ್ಷದಲ್ಲಿ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಡಿ.ವಿ.ಸದಾನಂದಗೌಡರಿಗೆ ಈ ಸ್ಥಾನ ಕೈ ತಪ್ಪಲು ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಮೇಲೆ ಶೋಭಾ ಒತ್ತಡ ಹೇರಿದ್ದರು ಎನ್ನಲಾಗಿದೆ.

ಗೌಡರು ಈಗಾಗಲೇ ಕೇಂದ್ರ ಸಚಿವರಾಗಿರುವುದರಿಂದ ಪುನಃ ಅವರಿಗೆ ಪಕ್ಷದಲ್ಲಿ ಇನ್ನೊಂದು ಸ್ಥಾನ ನೀಡುವುದು ಸರಿಯಲ್ಲ. ಒಬ್ಬ ವ್ಯಕ್ತಿ ಒಂದೇ ಎಂಬ ನಿಯಮದಂತೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಡಿವಿಎಸ್ ಬೇಡ ಎಂದು ಪಟ್ಟು ಹಿಡಿದಿದ್ದರು. ಇದನ್ನು ಜಾವ್ಡೇಕರ್ ಗಮನಕ್ಕೆ ತಂದು ಸದಾನಂದಗೌಡರಿಗೆ ಪ್ರಚಾ ಸಮಿತಿಯಿಂದ ಹೊರ ಹಾಕುವಲ್ಲಿ ಶೋಭಾ ಕೈವಾಡ ಇದೆ ಎಂಬುದು ಕೆಲವರ ಆರೋಪವಾಗಿದೆ. ಇದು ಪಕ್ಷದ ಮೂಲ ನಿವಾಸಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ.

ಈಗಾಗಲೇ ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದು ಅವರನ್ನೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಲಾಗಿದೆ. ಪಕ್ಷದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಬಾರದಂತೆ ಸದಾನಂದಗೌಡರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದರಲ್ಲಿ ಯಾವುದೇ ಪ್ರಮಾದವಿಲ್ಲ. ಪಕ್ಷದಲ್ಲಿ ಎಲ್ಲವೂ ತಮ್ಮ ಅಣತಿಯಂತೆ ನಡೆಯಬೇಕೆಂದು ಭಾವಿಸುವ ಶೋಭಾ ಈ ರೀತಿ ಮೂಗು ತೂರಿಸುವುದು ಸರಿಯಲ್ಲ ಎಂದು ಕೆಲವರು ಆಕ್ಷೇಪಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗೆ ಪ್ರತಿದಿನ ಪಟ್ಟಿ ಬದಲಾವಣೆ, ಆಪ್ತರಿಗೆ ಮಣೆ ಹಾಕುವುದಾದರೆ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ಕಾರ್ಯಕರ್ತರಿಗೆ ರವಾನೆಯಾಗುತ್ತದೆ. ಮೊದಲು ಪಕ್ಷದೊಳಗಿನ ಗೊಂದಲಗಳನ್ನು ಸರಿಪಡಿಸಿ ಎಂದು ಕೆಲ ನೊಂದ ಕಾರ್ಯಕರ್ತರು ಸಲಹೆ ಮಾಡಿದ್ದಾರೆ.

Facebook Comments

Sri Raghav

Admin