ಬಿಬಿಎಂಪಿ ಮಾಜಿ ಮೇಯರ್ ಶಾಂತಕುಮಾರಿ ಮತ್ತು ಎಚ್.ರವೀಂದ್ರ ಜೆಡಿಎಸ್ ತೆಕ್ಕೆಗೆ.. ?

ಈ ಸುದ್ದಿಯನ್ನು ಶೇರ್ ಮಾಡಿ

Raveendra--01-Shantakumari-

– ರಮೇಶ್‍ಪಾಳ್ಯ

ಬೆಂಗಳೂರು, ಅ.12-ಮಾಜಿ ಮೇಯರ್ ಶಾಂತಕುಮಾರಿ ಹಾಗೂ ಆಡಳಿತ ಪಕ್ಷದ ಮಾಜಿ ನಾಯಕ ಎಚ್.ರವೀಂದ್ರ ಜೆಡಿಎಸ್ ಸೇರಲು ತೀರ್ಮಾನಿಸಿದ್ದಾರೆ. ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಪುರಪಿತೃಗಳು ಬಿಬಿಎಂಪಿಯಿಂದ ವಿಧಾನಸೌಧದ ಮೆಟ್ಟಿಲೇರಲು ತವಕಿಸುತ್ತಿದ್ದಾರೆ. ಶಾಂತಕುಮಾರಿ ಹಾಗೂ ರವೀಂದ್ರ ಅವರು ಗೋವಿಂದರಾಜನಗರ ಮತ್ತು ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಈ ಇಬ್ಬರು ಮುಖಂಡರಿಗೆ ಮಾಜಿ ಸಚಿವ ವಿ.ಸೋಮಣ್ಣ ಹಾಗೂ ಮಾಜಿ ಡಿಸಿಎಂ ಆರ್.ಅಶೋಕ್ ಗಾಡ್‍ಫಾದರ್‍ಗಳು. ಈ ಇಬ್ಬರ ನೆರವಿನಿಂದ ವಿಧಾನಸಭಾ ಟಿಕೆಟ್ ಪಡೆಯಲು ತೀರ್ಮಾನಿಸಿದ್ದರು.

ಆದರೆ, ಗೋವಿಂದರಾಜನಗರದಿಂದ ಬಿಬಿಎಂಪಿ ಸದಸ್ಯ ಕೆ.ಉಮೇಶ್‍ಶೆಟ್ಟಿ ಇಲ್ಲವೇ ಸ್ವತಃ ವಿ.ಸೋಮಣ್ಣ ಅವರೇ ಸ್ಪರ್ಧಿಸುವ ಸಾಧ್ಯತೆಗಳಿವೆ. ಅದೇ ರೀತಿ ವಿಜಯನಗರದಿಂದ ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ ಅಥವಾ ಮಾಜಿ ಉಪ ಮೇಯರ್ ಎಂ.ಲಕ್ಷ್ಮೀನಾರಾಯಣ್ ಅವರಿಗೆ ಟಿಕೆಟ್ ದೊರೆಯುವ ಮುನ್ಸೂಚನೆ ದೊರೆತಿರುವ ಹಿನ್ನೆಲೆಯಲ್ಲಿ ಶಾಂತಕುಮಾರಿ ಮತ್ತು ರವೀಂದ್ರ ಅವರು ಬಿಜೆಪಿಗೆ ಗುಡ್‍ಬೈ ಹೇಳಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಈ ಇಬ್ಬರು ಮುಖಂಡರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತೊಂದು ಸುತ್ತಿನ ಮಾತುಕತೆ ಮುಗಿದ ನಂತರ ಈ ಇಬ್ಬರಿಗೂ ಕ್ರಮವಾಗಿ ಗೋವಿಂದರಾಜನಗರ ಮತ್ತು ವಿಜಯನಗರದಿಂದ ಜೆಡಿಎಸ್ ಟಿಕೆಟ್ ನೀಡಲು ಗೌಡರು ಸಮ್ಮತಿಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ಈ ಸಂಜೆಗೆ ಖಚಿತ ಪಡಿಸಿವೆ. ಕಳೆದ ಬಾರಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದ ರಂಗೇಗೌಡ ಅವರ ಪುತ್ರ ಹಾಲಿ ಬೆಂಗಳೂರು ನಗರ ಜೆಡಿಎಸ್ ಘಟಕದ ಅಧ್ಯಕ್ಷ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಆರ್.ಪ್ರಕಾಶ್ ಅವರಿಗೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ.

ಸ್ವಂತ ಬಲದಿಂದ ಅಧಿಕಾರ ಹಿಡಿಯಬೇಕೆಂಬ ಹಠಕ್ಕೆ ಬಿದ್ದಿರುವ ದೇವೇಗೌಡರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದ ಮೂಲೆ ಮೂಲೆಗಳಿಗೂ ಪ್ರವಾಸ ಕೈಗೊಂಡಿದ್ದಾರೆ. ಅದೇ ರೀತಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರೂ ಕೂಡ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‍ಗೆ ಹೆಚ್ಚಿನ ಸ್ಥಾನ ದೊರಕಿಸಿಕೊಡುವತ್ತ ಗಮನಹರಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನ ಮೇಲೆ ಹೆಚ್ಚು ಗಮನ ಹರಿಸಿದ್ದು, ಆಯಾ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿರುವ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರುಗಳಿಗೆ ಗಾಳ ಬೀಸುತ್ತಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‍ಗೆ ಉತ್ತಮ ಫಲಿತಾಂಶ ದೊರೆಯಲಿದೆ ಎಂಬ ಸುಳಿವು ದೊರೆಯುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್ ವಂಚಿತರೂ ಸೇರಿದಂತೆ ಹಲವಾರು ಪ್ರಭಾವಿ ಮುಖಂಡರು ಈಗಾಗಲೇ ಜೆಡಿಎಸ್‍ನತ್ತ ಮುಖ ಮಾಡಿದ್ದಾರೆ. ದಾಸರಹಳ್ಳಿ, ಚಾಮರಾಜಪೇಟೆ, ರಾಜರಾಜೇಶ್ವರಿನಗರ ಮತ್ತಿತರ ವಿಧಾನಸಭಾ ಕ್ಷೇತ್ರಗಳ ಹಲವಾರು ಹಾಲಿ ಮತ್ತು ಮಾಜಿ ಬಿಬಿಎಂಪಿ ಸದಸ್ಯರು, ಇನ್ನಿತರ ಹಲವಾರು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ತೆನೆ ಹೊರಲು ಸಿದ್ಧರಾಗಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು ನಗರದಲ್ಲಿ ಕನಿಷ್ಠ 8 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು, ಪ್ರಬಲ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದು, ಅವರ ಗಾಳಕ್ಕೆ ಈಗಾಗಲೇ ಶಾಂತಕುಮಾರಿ ಮತ್ತು ಎಚ್.ರವೀಂದ್ರ ಅವರು ಬಿದ್ದಿದ್ದು, ಇನ್ನಿತರರು ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Facebook Comments

Sri Raghav

Admin