ಮುಂದಿನ ವರ್ಷದಿಂದ ಕೇಂದ್ರ ಸರ್ಕಾರದಿಂದ ಆರೋಗ್ಯ ಪ್ರವಾಸ ನೀತಿ

ಈ ಸುದ್ದಿಯನ್ನು ಶೇರ್ ಮಾಡಿ

Satyajit-Rajan--01

ಬೆಂಗಳೂರು, ಅ.12- ರಾಜ್ಯ ಸರ್ಕಾರದ ಮಾದರಿಯಲ್ಲೇ ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಆರೋಗ್ಯ ಪ್ರವಾಸ ನೀತಿಯನ್ನು ರೂಪಿಸಲಿದೆ ಎಂದು ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಮಹಾ ನಿರ್ದೇಶಕ ಸತ್ಯಜಿತ್ ರಾಜನ್ ತಿಳಿಸಿದರು. ಎಫ್‍ಕೆಸಿಸಿಐ ಹಾಗೂ ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಅನುಕೂಲಕರ ಆರೋಗ್ಯ ಭಾರತ-2017 ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಹೆಲ್ತ್ ಟ್ಯೂರಿಸಂಗೆ ಹೆಚ್ಚು ಅವಕಾಶಗಳಿವೆ. ಹೀಗಾಗಿ ರಾಜ್ಯ ಸರ್ಕಾರ ಆರೋಗ್ಯ ಪ್ರವಾಸ ನೀತಿ ರೂಪಿಸಿ ಅನುಕೂಲ ಕಲ್ಪಿಸಿದೆ. ಅದೇ ಮಾದರಿಯಲ್ಲಿ ಕೇಂದ್ರ ಸರ್ಕಾರ ಸುಧಾರಿತ ನೀತಿಯನ್ನು ರೂಪಿಸಲು ಕ್ರಮ ಕೈಗೊಂಡಿದೆ. ಬಹುತೇಕ ಮುಂದಿನ ವರ್ಷದಿಂದ ಇದು ಜಾರಿಗೆ ಬರಲಿದೆ ಎಂದು ಹೇಳಿದರು.

ವಿದೇಶಿಗರಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಬೆಂಗಳೂರು, ಹೈದರಾಬಾದ್, ಕೋಲ್ಕತ್ತ, ಚೆನ್ನೈ ಸೇರಿದಂತೆ 6 ಕಡೆ ಪ್ರವಾಸೋದ್ಯಮ ಸೌಲಭ್ಯ ಕೇಂದ್ರಗಳನ್ನು ಆರಂಭಿಸಲಾಗುವುದು. ಈ ಕೇಂದ್ರಗಳ ಮೂಲಕ ವಿದೇಶಿಗರು ಆರೋಗ್ಯ ಪ್ರವಾಸದ ಸೌಲಭ್ಯವನ್ನು ಸುಲಭವಾಗಿ ಪಡೆಯಬಹುದಾಗಿದೆ. ತಮ್ಮ ದೇಶದಲ್ಲೇ ಕುಳಿತು ಭಾರತದ ವೈದ್ಯರನ್ನು ಸಂಪರ್ಕಿಸಬಹುದು. ಸಮಯ ನಿಗದಿಪಡಿಸಿಕೊಂಡು ಸುಲಭವಾಗಿ ವೀಸಾ ಕೂಡ ಪಡೆದುಕೊಳ್ಳಬಹುದು ಎಂದು ವಿವರಿಸಿದರು. ಈ ಸೌಲಭ್ಯ ಕೇಂದ್ರಗಳಿಗೆ ಮತ್ತಷ್ಟು ಅನುಕೂಲ ಒದಗಿಸಲು ವಿದೇಶಾಂಗ ಇಲಾಖೆ ಜತೆ ಮಾತುಕತೆ ನಡೆಸುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶಾಲಿನಿ ರಜನೀಶ್ ಮಾತನಾಡಿ, 70 ದೇಶಗಳಿಂದ ಸುಮಾರು 700 ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನಮ್ಮ ದೇಶದಲ್ಲಿ ಉತ್ತಮವಾದ ಚಿಕಿತ್ಸಾ ಸೌಲಭ್ಯವಿದೆ. ಚಿಕಿತ್ಸೆ ಪಡೆದು ಸುಧಾರಿಸಿಕೊಂಡವರು ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಕರ್ನಾಟಕ ಸರ್ಕಾರ ಉತ್ತಮ ನೀತಿ ರೂಪಿಸಿದೆ. ಅಲೋಪತಿಯ ಜತೆ ಆಯುಷ್ ಚಿಕಿತ್ಸಾ ಸೌಲಭ್ಯಗಳು ಲಭ್ಯವಾಗಲಿವೆ ಎಂದು ಹೇಳಿದರು.

ಭಾರತದಲ್ಲಿ ಪ್ರತಿ ಕುಟುಂಬವೂ ತನ್ನ ಆದಾಯದ ಮೂರನೇ ಒಂದು ಭಾಗವನ್ನು ಆರೋಗ್ಯಕ್ಕಾಗಿ ಖರ್ಚು ಮಾಡುತ್ತಿದೆ. ಈ ನಿಟ್ಟಿನಲ್ಲಿ ಹೆಲ್ತ್ ಟೂರಿಸಂನನ್ನು ಅಭಿವೃದ್ಧಿಪಡಿಸಿದರೆ ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಲಾಭ ಬರಲಿದ್ದು, ಆರ್ಥಿಕತೆಯಲ್ಲು ಅಭಿವೃದ್ಧಿಗೊಳ್ಳಲಿದೆ. ವಿದೇಶಿಗರು ಬಂದು ಉತ್ತಮ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಆ ಕಾರಣಕ್ಕಾಗಿ ಈ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Facebook Comments

Sri Raghav

Admin