ರಸ್ತೆಗುಂಡಿಗಳಲ್ಲಿ ಸಸಿ ನೆಟ್ಟು ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

BJP-Protest--04

ಬೆಂಗಳೂರು,ಅ.12-ಕಳೆದ ಒಂದು ತಿಂಗಳಿನಿಂದ ಸುರಿದಿರುವ ವರುಣನ ಆರ್ಭಟಕ್ಕೆ ತತ್ತರಿಸಿ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ಪರಿಹಾರ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಇಂದು ವಿನೂತನವಾಗಿ ಪ್ರತಿಭಟನೆ ನಡೆಸಿತು. ರಸ್ತೆಗುಂಡಿಗಳಲ್ಲಿ ಸಸಿ ನೆಡುವುದು, ಗುಂಡಿಗಳಿಗೆ ಬಣ್ಣ ಬಳಿದು ನಿದ್ರೆ ಗ್ಯಾರಂಟಿ, ನಿದ್ದೆರಾಮಯ್ಯ ಮೇಲೇಳಯ್ಯ ಎಂಬ ಘೋಷಣೆಗಳೊಂದಿಗೆ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ನಾಯಕರು ವಿನೂತನ ಪ್ರತಿಭಟನೆ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಪರಿಷತ್‍ನ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ , ಮುಖಂಡರಾದ ಆರ್.ಅಶೋಕ್, ಅರವಿಂದ ಲಿಂಬಾವಳಿ , ಸಂಸದರಾದ ಶೋಭ ಕರಂದ್ಲಾಜೆ, ಪಿ.ಸಿ.ಮೋಹನ್ ಸೇರಿದಂತೆ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರು ಮತ್ತಿತರರು ಇಂದು ನಗರ ಪ್ರದಕ್ಷಿಣೆ ನಡೆಸಿದರು. ಮೊದಲು ಕಟೋನ್ಮೆಂಟ್ ರೈಲ್ವೆ ನಿಲ್ದಾಣ , ಶಾಂತಿನಗರ, ಇನ್‍ಫ್ಯಾಂಟ್ರಿ ರಸ್ತೆ, ಸಿಲ್ಕ್‍ಬೋರ್ಡ್ ಸೇರಿದಂತೆ ಮತ್ತಿತರ ಕಡೆ ನಗರ ಪ್ರದಕ್ಷಿಣೆ ಮಾಡಿದ ಮುಖಂಡರು ಸರ್ಕಾರದ ವಿರುದ್ಧ ಕಿಡಿಕಾರಿದರು.

BJP-Protest--03

ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು ಮಹಾಮಳೆಯಿಂದ ಕೊಚ್ಚಿ ಹೋಗಿದ್ದವು. ರಸ್ತೆಯಲ್ಲಿದ್ದ ಗುಂಡಿಗಳಲ್ಲಿ ಸಸಿ ನೆಡುವ ಮೂಲಕ ಪ್ರತಿಭಟನಾನಿರತರು ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ನಡೆಸಿದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಹಲವು ಭಾಗ್ಯಗಳನ್ನು ನೀಡಿದ್ದಾರೆ. ಅನ್ನಭಾಗ್ಯ , ಶಾದಿಭಾಗ್ಯ ಜೊತೆಗೆ ಬೆಂಗಳೂರು ಮಹಾನಗರಕ್ಕೆ ಗುಂಡಿ ಭಾಗ್ಯ ನೀಡಿ ಜನತೆಯನ್ನು ಸಾಯುವ ಸ್ಥಿತಿಗೆ ತಂದಿದ್ದಾರೆ ಎಂದು ಮುಖಂಡರು ಹರಿಹಾಯ್ದರು.

BJP-Protest--02

ಕಂಟೊನ್ಮೆಂಟ್‍ನಿಂದ ಇನ್‍ಫ್ಯಾಂಟ್ರಿ ರಸ್ತೆ, ಶಾಂತಿನಗರ ವೀಕ್ಷಣೆ ಮಾಡಿದ ಮುಖಂಡರು ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಗೃಹ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಮತ್ತಿತರರ ಅಣುಕು ಶವಯಾತ್ರೆ ನಡೆಸಿದರು.ಅಲ್ಲಿಂದ ಸಿಲ್ಕ್‍ಬೋರ್ಡ್ ಮತ್ತಿತರ ಕಡೆ ಭೇಟಿ ನೀಡಿ, ಸ್ಥಳೀಯರಿಂದ ಕುಂದುಕೊರತೆಗಳನ್ನ ಆಲಿಸಿದರು.

ಪಾಲಿಕೆ ಸದಸ್ಯರಿಗೆ ಸೂಚನೆ:

ಈ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬೆಂಗಳೂರು ನಗರವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ನಗರದಲ್ಲಿ ಕಳೆದ ಒಂದು ತಿಂಗಳಿನಿಂದ ಮಹಾಮಳೆ ಸುರಿಯುತ್ತಲೇ ಇದೆ. ಅನೇಕ ಕಡೆ ನೀರು ನುಗ್ಗಿ ವಾರಗಟ್ಟಲೇ ಜನರು ಬೀದಿ ಪಾಲಾಗಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.  ಪ್ರಮುಖ ರಸ್ತೆಗಳೇ ಕಿತ್ತು ಹೋಗಿ ಹೊಂಡದಂತಾಗಿದೆ. ಅನೇಕ ಕಡೆ ಸವಾರರು ಬಿದ್ದು ಪ್ರಾಣವನ್ನು ಕಳೆದುಕೊಂಡಿದ್ದಾರೆ. ನಿದ್ರಾವಸ್ಥೆಯಲ್ಲಿರುವ ಸಿದ್ದರಾಮಯ್ಯ ಹಾಗೂ ಬಿಬಿಎಂಪಿ ಇನ್ನು ಎಷ್ಟು ಜನರನ್ನು ಬಲಿ ಪಡೆಯಬೇಕು ಎಂದು ಪ್ರಶ್ನಿಸಿದರು.

ಗುಂಡಿಗಳನ್ನೇ ಮುಚ್ಚಲು ಸಾಧ್ಯವಾಗದ ಮುಖ್ಯಮಂತ್ರಿಗಳು ವೈಟ್‍ಟ್ಯಾಪ್ ಹಾಕುತ್ತೇನೆ ಎಂದು ಹೇಳುತ್ತಿರುವುದು ಹಸಿಸುಳ್ಳು. ಮಹಾನಗರಕ್ಕೆ ಸಾವಿರಾರು ಕೋಟಿ ಖರ್ಚು ಮಾಡಿದ್ದೇವೆ ಎಂದು ಹೇಳುತ್ತಿರುವ ರಾಜ್ಯ ಸರ್ಕಾರಕ್ಕೆ ರಾಜಕಾಲುವೆಯಲ್ಲಿ ಹೂಳು ತೆಗೆಯಲು ಸಾಧ್ಯವಾಗಿಲ್ಲ. ಬಿಡುಗಡೆ ಮಾಡಿರುವ ಹಣ ಎಲ್ಲಿ ಹೋಗಿದೆ ಎಂದು ಬಿಎಸ್‍ವೈ ಆಕ್ರೋಶ ವ್ಯಕ್ತಪಡಿಸಿದರು.  ಬೆಂಗಳೂರನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ 2018ರ ವಿಧಾನಸಭೆ ಚುನಾವಣೆಯಲ್ಲಿ ನಗರದ ಜನತೆ ತಕ್ಕ ಪಾಠ ಕಲಿಸಬೇಕು. ಜನರಿಗೆ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿರುವ ಈ ಸರ್ಕಾರ ಜನತೆಯ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

Facebook Comments

Sri Raghav

Admin