ಶಕ್ತಿ ದೇವತೆ ಹಾಸನಾಂಬೆ ದರ್ಶನ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

hasanamba

ಹಾಸನ, ಅ.12- ವರ್ಷಕ್ಕೊಮ್ಮೆ ದರುಶನ ನೀಡುವ ಜಿಲ್ಲೆಯ ಶಕ್ತಿ ದೇವತೆ ಹಾಗೂ ಗ್ರಾಮ ದೇವತೆ ಶ್ರೀ ಹಾಸನಾಂಬೆ ದೇವಾಲಯದ ಬಾಗಿಲನ್ನು ಇಂದು ಮಧ್ಯಾಹ್ನ 12.31ಕ್ಕೆ ಸರಿಯಾಗಿ ಶುಭಲಗ್ನದಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ತೆರೆಯಲಾಯಿತು. ದೇವಾಲಯದ ಮುಂಭಾಗದಲ್ಲಿ ನೆಡಲಾಗಿದ್ದ ಬಾಳೆಕಂಗನ್ನು ಹಿಂದಿನಿಂದ ನಡೆದುಕೊಂಡು ಬಂದ ಪದ್ದತಿಯಂತೆ ಅರಸು ಮನೆತನದ ಹಿರಿಯರಾದ ನರಸಿಂಹರಾಜ ಅರಸು ಅವರು ಕತ್ತರಿಸಿದ ಬಳಿಕ ದೇವಾಲಯದ ಬಾಗಿಲಿಗೆ ಪೂಜೆ ನೆರವೇರಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಜನಪ್ರತಿನಿಧಿಗಳು, ಸ್ಥಳೀಯ ಅಧಿಕಾರಿಗಳ ಸಮ್ಮುಖದಲ್ಲಿ ತಳವಾರ ಮನೆತನದವರ ನೇತೃತ್ವದಲ್ಲಿ ಅರ್ಚಕರು ಬಾಗಿಲು ತೆರೆದರು.

ಇಂದು ಇಡೀ ದಿನ ಗ್ರಾಮ ದೇವತೆಗೆ ವಿಧ ವಿಧ ಪೂಜಾ ಕೈಂಕರ್ಯಗಳು ನೆರವೇರಲಿದೆ. ಹಾಗಾಗಿ ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ. ನಾಳೆ ಮುಂಜಾನೆಯಿಂದಲೇ ಜನರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆದರೂ ದೇವಾಲಯದ ಮುಂಭಾಗದಲ್ಲಿ ನಡೆಯುವ ಪೂಜಾ ಕಾರ್ಯಗಳನ್ನು ನೋಡಲು ಜನ ಕಿಕ್ಕಿರಿದು ತುಂಬಿದ್ದಾರೆ.

ನಾಳೆಯಿಂದ ಅ.20ರಂದು ಮಧ್ಯರಾತ್ರಿ 12 ಗಂಟೆವರೆಗೆ ದರುಶನ ಭಾಗ್ಯ ಇರುತ್ತದೆ. 21ರಂದು ಮಧ್ಯಾಹ್ನ ದೇವಾಲಯದ ಬಾಗಿಲು ಮುಚ್ಚಿದರೆ ಮತ್ತೆ ಮುಂದಿನ ವರ್ಷವೇ ತೆಗೆಯುವುದು. ಮುಜರಾಯಿ ಇಲಾಖೆಯಿಂದ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಸಕಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಸರತಿ ಸಾಲಿನಲ್ಲಿ ಹೋಗಲು ದೇವಾಲಯದ ಸುತ್ತ ಕಂಬಿಗಳನ್ನು ಹಾಕಲಾಗಿದೆ.  ಇದೇ ಮೊದಲ ಬಾರಿಗೆ ಪ್ರವಾಸೋಧ್ಯಮ ಇಲಾಖೆ 200ರೂ.ಗೆ ಸ್ಥಳೀಯ ಪ್ರವಾಸಿ ತಾಣಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿದೆ. ಕೊಂಡಜ್ಜಿ, ಕೋರವಂಗಲ, ರುದ್ರಪಟ್ಟಣ, ರಾಮನಾಥಪುರ, ಹಳೇಬೀಡು, ಬೇಲೂರು, ದೊಡ್ಡಬಿದ್ದವಳ್ಳಿಗೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಹೋಗಿ ಬರಬಹುದಾಗಿದೆ.ನೇರ ದರ್ಶನಕ್ಕೆ ಒಬ್ಬರಿಗೆ 1000ರೂ. ಹಾಗೂ ವಿಶೇಷ ದರ್ಶನಕ್ಕೆ 300ರೂ. ನಿಗದಿ ಪಡಿಸಲಾಗಿದೆ. ಈಗಾಗಲೇ ರಾಜ್ಯ ಹಾಗೂ ಇತರೆ ರಾಜ್ಯಗಳಿಂದಲೂ ಭಕ್ತರು ನಗರಕ್ಕೆ ಆಗಮಿಸುತ್ತಿದ್ದಾರೆ.

ದೇವಾಲಯವನ್ನು ತಳಿರು ತೋರಣ, ಹೂವು ಹಾಗೂ ವಿದ್ಯುತ್ ದೀಪಾಲಂಕರಗಳಿಂದ ಅಲಂಕರಿಸಲಾಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

Facebook Comments

Sri Raghav

Admin