ಸಯನೈಡ್ ಮೋಹನ್‍ಗೆ ಗಲ್ಲು ಬದಲು ಜೀವವಿರುವವರೆಗೂ ಜೈಲುಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Mohan--02

ಬೆಂಗಳೂರು, ಅ.12- ಪುತ್ತೂರಿನ ಅನಿತಾ ಎಂಬ ಯುವತಿಯ ಕೊಲೆ ಪ್ರಕರಣದ ಅಪರಾಧಿ ಸಯನೈಡ್ ಮೋಹನ್‍ಗೆ ಜೀವಿತಾವಧಿವರೆಗೆ ಸಾಧಾರಣ ಜೈಲು ಶಿಕ್ಷೆ ವಿಧಿಸಿರುವ ಹೈಕೋರ್ಟ್ ವಿಭಾಗೀಯ ಪೀಠ ಯಾವ ಕಾರಣಕ್ಕೂ ಜೈಲಿನಿಂದ ಬಿಡುಗಡೆ ಮಾಡಬಾರದು ಎಂದು ಆದೇಶಿಸಿ ಅಧೀನ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಮಾರ್ಪಾಟು ಮಾಡಿದೆ.

ಅಧೀನ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ರದ್ದು ಕೋರಿ ಸಯನೈಡ್ ಮೋಹನ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಾಧೀಶರಾದ ರವಿ ಮಳಿಮಠ್ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಖುನ್ನಾ ಅವರು ಸಯನೈಡ್ ಮೋಹನ್‍ಗೆ ಜೀವಿತಾವಧಿವರೆಗೆ ಜೈಲುಶಿಕ್ಷೆ ವಿಧಿಸಿದ್ದಾರೆ. ಸಾಯುವವರೆಗೆ ಜೈಲಿನಲ್ಲೇ ಸಾಧಾರಣ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ಪ್ರಕಟಿಸಿದ್ದಾರೆ.
ಸಯನೈಡ್ ಮೋಹನ್ ಎಂದೇ ಕುಖ್ಯಾತಿಯಾಗಿದ್ದ ಈತ ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತನ್ನ ಪರವಾಗಿ ತಾನೇ ವಾದ ಮಂಡಿಸಿದ್ದ.

ಪುತ್ತೂರಿನ ಅನಿತಾ ಕೊಲೆ ಪ್ರಕರಣ ಸಂಬಂಧ ತೀರ್ಪು ಹೊರಬಿದ್ದಿದ್ದು, ನ್ಯಾಯಾಲಯ ಜೀವಿತಾವಧಿ ಶಿಕ್ಷೆ ನೀಡಿದೆ. ಮಹಿಳೆಗೆ ಸಯನೈಡ್ ನೀಡಿ ಮೋಹನ್ ಕೊಲೆಗೈದಿರುವುದಕ್ಕೆ ಪ್ರಾಸಿಕ್ಯೂಷನ್ ಸಲ್ಲಿಸಿರುವ ಸಾಕ್ಷ್ಯಗಳು ಪೂರಕವಾಗಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಕೆಳ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ಖಾಯಂಗೊಳಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ಶಿಕ್ಷೆಯನ್ನು ಮಾರ್ಪಡಿಸಿ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿದೆ.

ಅನಿತಾ ಎಂಬಾಕೆ ಜತೆ ಮೈಸೂರಿನ ಟಿಸಿ ರಸ್ತೆಯ ಲಾಡ್ಜ್‍ಗೆ ತೆರಳಿ ಆಕೆಯನ್ನು ಕೊಲೆಗೈದಿರುವ ಬಗ್ಗೆ ಪೊಲೀಸರು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದರು. 2009ರ ಆಗಸ್ಟ್ 10ರಂದು ಆರೋಪಿಯನ್ನು ಪೊಲೀಸರು ಬಂಧಿಸಿದ ಬಳಿಕ ಆತನ ಎರಡನೆ ಪತ್ನಿ ಮನೆಗೆ ತೆರಳಿದಾಗ 10 ಸಯನೈಡ್ ದೊರೆತಿದ್ದವು. ಪೊಲೀಸರೇ ತನ್ನ ಪತ್ನಿ ಮನೆಯಿಂದ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ ಎಂದು ಈತ ವಾದಿಸಿದ್ದ. ಅಲ್ಲದೆ, ಬಲವಂತವಾಗಿ ನನ್ನ ಮೇಲೆ ಹಲ್ಲೆ ನಡೆಸಿ ಬೆದರಿಸಿ ಹೇಳಿಕೆಗಳನ್ನು ಪಡೆದಿದ್ದರು ಎಂದು ವಾದ ಮಾಡಿದ್ದ. ಇವನ ವಾದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈತನ ವಾದವನ್ನು ಒಪ್ಪಲಿಲ್ಲ.

Facebook Comments

Sri Raghav

Admin