ಅಮೆರಿಕಾ ಕಾಳ್ಗಿಚ್ಚಿನಲ್ಲಿ ಬೆಂದುಹೋದವರ ಸಂಖ್ಯೆ 34ಕ್ಕೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

america
ಸಂತಾ(ಅಮೆರಿಕ), ಅ. 13- ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದ ಭೀಕರ ಅಗ್ನಿಜ್ವಾಲೆಯಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಇಂದೂ ಮುಂದುವರಿದಿದ್ದು, ಮತ್ತೆ 12 ಬೆಂದುಹೋದ ದೇಹಗಳು ದೊರೆಯುವುದರೊಂದಿಗೆ ಬಲಿಯಾದವರ ಸಂಖ್ಯೆ 34ಕ್ಕೆ ಏರಿದೆ. ಇನ್ನೂ ಕೂಡ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಪರಿಹಾರ ಕಾರ್ಯಾಚರಣೆ ತಂಡದವರು ಆತಂಕ ವ್ಯಕ್ತಪಡಿಸಿದ್ದಾರೆ. ಶ್ವಾನ ತಂಡವನ್ನು ಬಳಸಿ ಮೃತದೇಹಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕಳೆದ ಭಾನುವಾರ ಕಾಣಿಸಿಕೊಂಡ ಭಯಂಕರ ಬೆಂಕಿಯಲ್ಲಿ ಕ್ಯಾಲಿಫ್ರೋರ್ನಿಯಾ ನಗರದ ಸಾವಿರಾರು ಮಂದಿ ಮನೆಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದು, ಸುಮಾರು 76 ಸಾವಿರ ಹೆಕ್ಟೇರ್(2 ಲಕ್ಷ ಎಕರೆ)ಗಳಿಗೂ ಹೆಚ್ಚಿನ ಕಾಡು ಬೆಂಕಿಗಾಹುತಿಯಾಗಿದೆ. ನಿನ್ನೆಯಿಂದ ಭಾರೀ ಗಾಳಿ ಬೀಸುತ್ತಿದ್ದು ಬೆಂಕಿಯನ್ನು ನಿಯಂತ್ರಿಸಲು ಎಂಟು ಸಾವಿರಕ್ಕೂ ಅಧಿಕ ಸಂಖ್ಯೆಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಬೆಂಕಿಯ ಕೆನ್ನಾಲಿಗೆಗಳು ಆಗಸದೆತ್ತರಕ್ಕೆ ಚಿಮ್ಮುತ್ತಿವೆ. ಇಷ್ಟಾದರೂ ಹವಾಮಾನ ಸದ್ಯ ಅನುಕೂಲಕರವಾಗುವ ಯಾವ ಸಾಧ್ಯತೆಗಳು ಕಾಣುತ್ತಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದ್ದು ಸರ್ಕಾರ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಇಡೀ ಪ್ರಕೃತಿಯೇ ಪ್ರತಿಕೂಲವಾಗಿರುವಾಗ ನಾವೇನು ಮಾಡಲು ಸಾಧ್ಯ ಎಂದು ಅಗ್ನಿಶಾಮಕ ದಳದ ಮುಖ್ಯಸ್ಥ ಕೆನ್ ಪಿಮ್ಲೋಟ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಬೆಂಕಿಯಿಂದ ತೀವ್ರತರವಾಗಿ ಜರ್ಝರಿತವಾಗಿರುವ ಸೊನಾಮ ಪ್ರಾಂತ್ಯದಲ್ಲಿ 1,100 ಮಂದಿ ನಾಪತ್ತೆಯಾಗಿದ್ದು ಅವರ ಗತಿ ಏನಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿಗಳೂ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಕ್ಯಾಲಿಫ್ರೋರ್ನಿಯಾದಲ್ಲಿ ಇದೊಂದು ಭಾರೀ ದುರಂತ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತುರ್ತುಸ್ಥಿತಿ ಘೋಷಿಸಿದ್ದಾರೆ.

Facebook Comments