ಕಪ್ಪಕಾಣಿಕೆ ಸಂಭಾಷಣೆ ಸಾಬೀತು : ಬಿಎಸ್ವೈ-ಅನಂತ್ ವಿರುದ್ಧ ದೂರು ದಾಖಲಿಸಲು ಎಸಿಬಿ ಹಿಂದೇಟು ..?

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-and-Anat-Kumar

ಬೆಂಗಳೂರು,ಅ.13-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ಹೈಕಮಾಂಡ್‍ಗೆ ಕಪ್ಪ ಕಾಣಿಕೆ ನೀಡಿರುವ ಕುರಿತು ನಡೆಸಿರುವ ಸಂಭಾಷಣೆ ಅಸಲಿ ಎಂದು ವಿಧಿವಿಜ್ಞಾನ ಪ್ರಯೋಗಾಲಯ(ಎಸ್‍ಎಫ್‍ಎಲ್) ಸಾಬೀತಾದರೂ ಇಬ್ಬರ ವಿರುದ್ಧ ದೂರು ದಾಖಲಿಸಲು ಎಸಿಬಿ ಹಿಂದೇಟು ಹಾಕಿದೆ. ಸಿಡಿಯಲ್ಲಿರುವುದು ಯಡಿಯೂರಪ್ಪ ಮತ್ತು ಅನಂತಕುಮಾರ್ ಧ್ವನಿಯೇ ಎಂದು ಎಸ್‍ಎಫ್‍ಎಲ್ ವರದಿಯಲ್ಲಿ ಸಾಬೀತಾಗಿತ್ತು. ಈ ಇಬ್ಬರ ವಿರುದ್ಧ ಎಸಿಬಿಯಲ್ಲಿ ದೂರು ನೀಡಿ ಎಫ್‍ಐಆರ್ ದಾಖಲಿಸಲು ಸಿದ್ಧತೆ ನಡೆದಿತ್ತು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ , ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಎಸಿಬಿಯ ಡಿಜಿಪಿ ಎಂ.ಎನ್.ರೆಡ್ಡಿ ಸೇರಿದಂತೆ ಕೆಲವು ಕಾನೂನು ತಜ್ಞರ ಜೊತೆ ಮಾತುಕತೆ ನಡೆಸಿದ್ದರು.

ಯಡಿಯೂರಪ್ಪ , ಅನಂತಕುಮಾರ್ ವಿರುದ್ದ ಎಫ್‍ಐಆರ್ ಹಾಕಿದರೆ ರಾಜಕೀಯವಾಗಿ ಅವರನ್ನು ಕಟ್ಟಿ ಹಾಕಬಹುದೆಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ ಎಸಿಬಿ ಇಬ್ಬರ ವಿರುದ್ಧ ಎಫ್‍ಐಆರ್ ಹಾಕಿದರೆ ಸರ್ಕಾರಕ್ಕೆ ತಿರುಗು ಬಾಣವಾಗಲಿದೆ ಎಂದು ಕಾನೂನು ತಜ್ಞರು ಸಲಹೆ ನೀಡಿದ್ದಾರೆ.
ಹೀಗಾಗಿ ಸದ್ಯಕ್ಕೆ ಅನಂತಕುಮಾರ್ ಮತ್ತು ಯಡಿಯೂರಪ್ಪ ವಿರುದ್ದ ಎಸಿಬಿ ಎಫ್‍ಐಆರ್ ಹಾಕಲು ಮೀನಾಮೇಷ ಎಣಿಸುತ್ತಿದೆ.

ಕಾರಣವೇನು:

ಎಸ್‍ಎಫ್‍ಎಲ್ ವರದಿ ಆಧಾರದ ಮೇಲೆ ಎಫ್‍ಐಆರ್ ದಾಖಲಿಸಿದರೆ ಸಾಕ್ಷಿಗಳನ್ನು ಸಂಗ್ರಹಿಸಬೇಕಾಗುತ್ತದೆ. ಹೈಕಮಾಂಡ್‍ಗೆ ಕಪ್ಪ ಕಾಣಿಕೆ ನೀಡಿದ್ದರ ಕುರಿತು ನಾವು ದಾಖಲೆಗಳನ್ನು ಕಲೆ ಹಾಕುವುದು ಅಷ್ಟು ಸುಲಭದ ಮಾತಲ್ಲ.  ಎಫ್‍ಐಆರ್ ಹಾಕಿರುವುದನ್ನು ಪ್ರಶ್ನಿಸಿ ನಾಳೆ ನ್ಯಾಯಾಲಯದಲ್ಲಿ ದೂರುದಾರರು ಪ್ರಶ್ನಿಸಬಹುದು. ಯಾವ ಆಧಾರದ ಮೇಲೆ ನೀವು ಎಫ್‍ಐಆರ್ ದಾಖಲಿಸಿದ್ದೀರಿ, ದೂರಿಗೆ ಸಂಬಂಧಿಸಿದಂತೆ ನಿಮ್ಮ ಬಳಿ ಏನು ಸಾಕ್ಷಿಗಳಿಗೆ ಎಂದು ನ್ಯಾಯಾಲಯ ಪ್ರಶ್ನಿಸಿದರೆ ಸರ್ಕಾರ ಮತ್ತು ಎಸಿಬಿ ಮುಜುಗರಕ್ಕೆ ಸಿಲುಕುತ್ತದೆ ಎಂದು ಕಾನೂನು ತಜ್ಞರು ಸಲಹೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಎಸಿಬಿಯನ್ನು ಸರ್ಕಾರ ದುರುಪಯೋಗಪಡಿಸಿಕೊಳ್ಳತ್ತದೆ ಎಂಬ ಆರೋಪ ಕೇಳಿಬರುತ್ತಿದೆ. ಕೇವಲ ವಿರೋಧ ಪಕ್ಷಗಳನ್ನು ಗುರಿಯಾಗಿಟ್ಟುಕೊಂಡು ದೂರು ದಾಖಲಿಸುತ್ತಿದೆ ಎಂಬ ಆರೋಪಗಳು ಸಾರ್ವಜನಿಕರಲ್ಲಿದೆ.  ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತು ಅನಂತಕುಮಾರ್ ವಿರುದ್ದ ಎಫ್‍ಐಆರ್ ದಾಖಲಿಸಿದರೆ ಸಾಕ್ಷಿಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲ. ಹೈಕಮಾಂಡ್‍ಗೆ ಕಪ್ಪ ಕಾಣಿಕೆ ನೀಡಿದ್ದರೆ ಯಾರು ಯಾವ ಸಂದರ್ಭದಲ್ಲಿ ಎಷ್ಟು ಹಣ ನೀಡಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕಾಗುತ್ತದೆ.

ಬೇನಾಮಿ ಹಣದ ವಹಿವಾಟು ನಡೆದಿದ್ದರೆ ಇದನ್ನು ಜಾರಿ ನಿರ್ದೇಶನಾಲಯ ತನಿಖೆ ಮಾಡಬೇಕಾಗುತ್ತದೆ. ಜೊತೆಗೆ ಸಿಡಿಯನ್ನು ತಮಗಿಷ್ಟಕ್ಕೆ ಅನುಗುಣವಾಗಿ ತಿರುಚಲಾಗಿದೆ ಎಂದು ಆರೋಪಿಸಲಾಗಿದೆ.  ಇದನ್ನೇ ಮುಂದಿಟ್ಟುಕೊಂಡು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಇಡೀ ಸಿಡಿಯಲ್ಲಿ ನಡೆದಿರುವ ಸಂಭಾಷಣೆಯನ್ನು ಬಿತ್ತರಿಸಬೇಕಾಗುತ್ತದೆ. ಜೊತೆಗೆ ಈ ಸಿಡಿ ಎಲ್ಲಿಂದ ಬಂತು, ಹೇಗೆ ಬಂತು, ಯಾರು ಕೊಟ್ಟರು ಎಂಬ ಮೂಲ ಪ್ರಶ್ನೆ ಎದುರಾಗುತ್ತದೆ. ಇದರಿಂದ ಎಫ್‍ಐಆರ್ ಹಾಕಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏನಿದು ಸಿಡಿ:

ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಡೈರಿಯೊಂದು ಸಿಕ್ಕಿತ್ತು. ಈ ಡೈರಿಯಲ್ಲಿ ಸರ್ಕಾರದ ಕೆಲವು ಪ್ರಭಾವಿ ಸಚಿವರು ಕಾಂಗ್ರೆಸ್ ಹೈಕಮಾಂಡ್‍ಗೆ ಕಪ್ಪ ಕಾಣಿಕೆ ನೀಡಿದ್ದಾರೆ ಎಂಬ ಸ್ಪೋಟಕ ಮಾಹಿತಿ ಬಹಿರಂಗಗೊಂಡಿತ್ತು. ಇದರಿಂದ ಕಾಂಗ್ರೆಸ್‍ಗೆ ಭಾರೀ ಮುಜುಗರವಾಗಿತ್ತು.  ಈ ಡೈರಿ ಬಿಡುಗಡೆ ಹಿಂದೆ ಬಿಜೆಪಿಯ ಕೈವಾಡ ಇದೆ ಎಂಬುದು ಕಾಂಗ್ರೆಸ್ ಶಂಕೆ. ಇದೇ ಸಂದರ್ಭದಲ್ಲಿ ಅನಂತಕುಮಾರ್ ಮತ್ತು ಯಡಿಯೂರಪ್ಪ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಸಿದ ಸಂಭಾಷಣೆ ಕಮಲ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿತ್ತು. ಸಂಭಾಷಣೆ ಕುರಿತು ತನಿಖೆ ನಡೆಸುವಂತೆ ಕಾಂಗ್ರೆಸ್ ನಾಯಕರು ಇಬ್ಬರ ವಿರುದ್ಧ ದೂರು ಸಲ್ಲಿಸಿದ್ದರು.

ಕಳೆದ 4ರಂದು ಎಸ್‍ಎಫ್‍ಎಲ್ ರಾಜ್ಯ ಸರ್ಕಾರಕ್ಕೆ ನೀಡಿದ ವರದಿಯಲ್ಲಿ ಸಿಡಿಯಲ್ಲಿರುವ ಸಂಭಾಷಣೆಯ ಧ್ವನಿ ಬಿಎಸ್‍ವೈ ಮತ್ತು ಅನಂತಕುಮಾರ್ ಅವರದ್ದೇ ಎಂಬುದನ್ನು ಖಚಿತ ಪಡಿಸಿತ್ತು.

Facebook Comments

Sri Raghav

Admin