ಜಲಾವೃತಗೊಂಡ ದಸರಾ ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ ಹಿಡಿಶಾಪ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಅ.13-ನಗರದಲ್ಲಿ ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ದೊಡ್ಡಕೆರೆ ಆವರಣದಲ್ಲಿರುವ ದಸರಾ ವಸ್ತುಪ್ರದರ್ಶನ ಜಲಾವೃತವಾಗಿದ್ದು, ಮಳಿಗೆದಾರರು ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ದಸರಾ ವಸ್ತು ಪ್ರದರ್ಶನ ಪ್ರಾರಂಭವಾದ ದಿನದಿಂದಲೂ ಮಳೆ ಬರುತ್ತಲೇ ಇದೆ. ಕೆಲ ದಿನಗಳ ನಂತರ ಭಾರಿ ಮಳೆ ಸುರಿದಿದ್ದರಿಂದ ಅಂಗಡಿ ಮಾಲೀಕರು ಆತಂಕಕ್ಕೊಳಗಾಗಿದ್ದರು. ಈ ವೇಳೆ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು ಹಾಗೂ ಅಧಿಕಾರಿಗಳು ಪರಿಶೀಲಿಸಿ ಒಂದೆರಡು ದಿನಗಳಲ್ಲಿ ನೀರು ಹೊರಹಾಕಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಿನ್ನೆ ಮತ್ತೆ ಭಾರೀ ಮಳೆ ಸುರಿದಿದ್ದರಿಂದ ಇಡೀ ವಸ್ತು ಪ್ರದರ್ಶನ ನೀರಿನಿಂದ ತುಂಬಿ ಹೋಗಿದೆ. ಹಾಗಾಗಿ ಮಾರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಸ್ತುಪ್ರದರ್ಶನ ಪಕ್ಕದಲ್ಲೇ ರಾಜಕಾಲುವೆ ಇದ್ದು ಇಲ್ಲಿಂದಲೂ ಕೊಳಚೆ ನೀರು ವಸ್ತು ಪ್ರದರ್ಶನದ ಆವರಣಕ್ಕೆ ನುಗ್ಗಿದೆ. ಬಹಳಷ್ಟು ವ್ಯಾಪಾರಗಾರರು ಹೊರ ರಾಜ್ಯಗಳಿಂದ ಬಂದಿರುವುದರಿಂದ ಅವರೆಲ್ಲ ಇಲ್ಲೆ ಮಲಗಬೇಕು. ಇವರೆಲ್ಲ ನೀರಿನಿಂದಾಗಿ ನಿದ್ರೆ ಇಲ್ಲದೆ ಪರಿತಪಿಸಿದ್ದಾರೆ. ಅಮ್ಯುಸ್ಮೆಂಟ್ ಪಾರ್ಕ್ ಸಂಪೂರ್ಣ ಜಲಾವೃತವಾಗಿದೆ. ವ್ಯಾಪಾರಗಾರರ ಪಾಡಂತೂ ಹೇಳತೀರದಾಗಿದೆ. ವಸ್ತುಪ್ರದರ್ಶನದ ಒಳಭಾಗದಲ್ಲಿ ಅರ್ಧ ಆಳುದ್ದ ನೀರು ನಿಂತಿರುವುದರಿಂದ ಯಾರೂ ಒಳಗೆ-ಹೊರಗೆ ಹೋಗಲಾಗುತ್ತಿಲ್ಲ. ಆದ್ದರಿಂದ ಇಂದು ವಸ್ತುಪ್ರದರ್ಶನಕ್ಕೆ ಬೀಗ ಹಾಕಿ ನೀರು ತೆಗೆದು ಪ್ರಾರಂಭಿಸಲು ಪ್ರಾಧಿಕಾರ ಚಿಂತಿಸಿದೆ.

Facebook Comments

Sri Raghav

Admin