ರಸ್ತೆಗುಂಡಿ ಮುಚ್ಚಲು 3 ತಿಂಗಳ ವೇತನ ನೀಡಲು ಮುಂದಾದ ಬಿಬಿಎಂಪಿ ಬಿಜೆಪಿ ಸದಸ್ಯರು

ಈ ಸುದ್ದಿಯನ್ನು ಶೇರ್ ಮಾಡಿ

road

ಬೆಂಗಳೂರು, ಅ.13- ನಗರದಲ್ಲಿ ಹಾಳಾಗಿರುವ ರಸ್ತೆಗಳನ್ನು ಬಿಜೆಪಿ ಸದಸ್ಯರು ತಮ್ಮ ಸ್ವಂತ ಹಣದಿಂದ ಸರಿಪಡಿಸಲು ಮುಂದಾಗಿದ್ದಾರೆ. ಬಿಬಿಎಂಪಿಯ 101 ಬಿಜೆಪಿ ಸದಸ್ಯರು ತಮ್ಮ ಮೂರು ತಿಂಗಳ ವೇತನವನ್ನು ರಸ್ತೆ ಗುಂಡಿ ಮುಚ್ಚಲು ನೀಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಈ ಕುರಿತು ಪಾಲಿಕೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿಯವರಿಗೆ ಸೂಚನೆ ನೀಡಿದ್ದಾರೆ. ಅದರಂತೆ ಬಿಜೆಪಿ ಎಲ್ಲ ಸದಸ್ಯರು ತಮ್ಮ ಮೂರು ತಿಂಗಳ ವೇತನವನ್ನು ನೀಡುವರು.

ಒಬ್ಬ ಸದಸ್ಯನಿಗೆ ಒಂದು ತಿಂಗಳಿಗೆ 7500 ಗೌರವಧನ ಸಿಗಲಿದೆ. ಮೂರು ತಿಂಗಳಿಗೆ 22,500 ಆಗಲಿದೆ. 101 ಸದಸ್ಯರ 22,500ರಂತೆ 22.50 ಲಕ್ಷ ರೂ.ಗಳಾಗಲಿದ್ದು, ಈ ಹಣವನ್ನು ಬಳಕೆ ಮಾಡಿಕೊಂಡು ಅವರವರ ವಾರ್ಡ್‍ಗಳಲ್ಲಿ ಸದಸ್ಯರು ಗುಂಡಿ ಬಿದ್ದಿರುವ ರಸ್ತೆಗಳನ್ನು ಸರಿಪಡಿಸಲಿದ್ದಾರೆ. ನಿನ್ನೆ ಬೊಮ್ಮನಹಳ್ಳಿ ಶಾಸಕ ಸತೀಶ್‍ರೆಡ್ಡಿ ತಮ್ಮ ಸ್ವಂತ ಹಣದಿಂದ ಗುಂಡಿ ಮುಚ್ಚುವ ಕಾರ್ಯ ಮಾಡಿದ್ದರು. ಇದನ್ನು ಕಂಡು ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಬಿಜೆಪಿಯ ಎಲ್ಲ ಸದಸ್ಯರೂ ತಮ್ಮ ಮೂರು ತಿಂಗಳ ವೇತನದಲ್ಲಿ ನಗರದ ಗುಂಡಿಮುಚ್ಚುವ ಕಾರ್ಯದಲ್ಲಿ ತೊಡಗಲಿದ್ದಾರೆ. ಇಂದು ರಾಜಾಜಿನಗರದಲ್ಲಿ ಶಾಸಕ ಸುರೇಶ್‍ಕುಮಾರ್ ಅವರು ವಿವಿಧ ರಸ್ತೆಗಳಿಗೆ ಭೇಟಿ ನೀಡಿ ಗಂಡಾಂತರವಾದ ಗುಂಡಿಗಳನ್ನು ಗುರುತಿಸುತ್ತಿದ್ದುದು ಕಂಡುಬಂದಿತು. ಎಲ್ಲ ಬಿಜೆಪಿ ಸದಸ್ಯರ ವಾರ್ಡ್‍ಗಳಲ್ಲೂ ಗುಂಡಿ ಮುಚ್ಚುವ ಕಾರ್ಯ ಪ್ರಾರಂಭವಾಗಲಿದೆ.

Facebook Comments