ರಾಜ್ಯಾದ್ಯಂತ ಮುಂದುವರಿದ ವರುಣ ಆರ್ಭಟ, ಕುಸಿದ ಮನೆಗಳು, ತುಂಬಿ ಹರಿದ ಕೆರೆ-ಕಟ್ಟೆಗಳು

ಈ ಸುದ್ದಿಯನ್ನು ಶೇರ್ ಮಾಡಿ

Rain--02

ಬೆಂಗಳೂರು, ಅ.13- ರಾಜ್ಯಾದ್ಯಂತ ವರ್ಷಧಾರೆ ಮುಂದುವರಿದಿದೆ. ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಕೆರೆ-ಕಟ್ಟೆಗಳು ತುಂಬಿ ಕೋಡಿ ಹರಿದಿವೆ. ಬಳ್ಳಾರಿ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿದ್ದು, ಹಳ್ಳ-ಕೊಳ್ಳಗಳೆಲ್ಲ ತುಂಬಿ ಹರಿದಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿರುವುದಲ್ಲದೆ ಹಲವು ಮನೆಗಳು ಕುಸಿದುಬಿದ್ದಿವೆ. ಯಾವುದೇ ಪ್ರಾಣಾಪಾಯವಾಗಿಲ್ಲ.

ಚಿತ್ರದುರ್ಗದಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಮಲ್ಲಾಪುರ ಕೆರೆ ತುಂಬಿ ಹರಿದಿದೆ. ನಗರದೆಲ್ಲೆಡೆ ಸುರಿದ ಭಾರೀ ಮಳೆಗೆ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.  ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ನಿನ್ನೆ ಕೋಲಾರದಲ್ಲಿ ಸುರಿದ ಮಳೆಗೆ ನರಸಾಪುರ ಕೆರೆ ಭರ್ತಿಯಾಗಿದೆ.ಬರದ ಜಿಲ್ಲೆಗಳಲ್ಲಿ ಕುಂಭದ್ರೋಣ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು, ಸಾರ್ವಜನಿಕರು ಸಂತಸಗೊಂಡಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ನಿನ್ನೆ ಸುರಿದ ಮಳೆಗೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಪರದಾಡಿದರು. ಟ್ರಾಫಿಕ್ ಸಮಸ್ಯೆ ಉಂಟಾಗಿ ಗಂಟೆಗಟ್ಟಲೆ ವಾಹನಗಳಲ್ಲಿ ಮಳೆಯಲ್ಲೇ ನಿಂತಿದ್ದು ಕಂಡುಬಂತು. ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುತ್ತಿದ್ದರು.  ಮೈಸೂರಿನ ಕಾವೇರಿ ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಜಲಾಶಯ ಭರ್ತಿಯಾಗತೊಡಗಿದೆ. ಕಬಿನಿ, ಕೆಆರ್‍ಎಸ್, ಹೇಮಾವತಿ, ಹಾರಂಗಿ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿ ಜಲಾಶಯ ಭರ್ತಿಯಾಗಿದ್ದು, ಜಲಾಶಯದ ಏಳು ಕ್ರೆಸ್‍ಗೇಟ್‍ನಿಂದ ನೀರನ್ನು ಹೊರಬಿಡಲಾಗುತ್ತಿದೆ.

ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ನದಿಪಾತ್ರದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದ್ದು, ಹಲವರನ್ನು ಸ್ಥಳಾಂತರ ಮಾಡಲಾಗಿದೆ. ಅಲ್ಲಿನ ಜನರ ನೆರವಿಗೆ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ದಾವಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮಳೆಯೂ ಮುಂದುವರಿದಿರುವುದರಿಂದ ಪ್ರವಾಹದ ಭೀತಿ ಎದುರಾಗಿದೆ.

ಅ.18ರವರೆಗೆ ಮಳೆ ಮುಂದುವರಿಕೆ:

ರಾಜ್ಯದ ಒಳನಾಡಿನಲ್ಲಿ ಎಡಬಿಡದೆ ನಿರಂತರವಾಗಿ ಬೀಳುತ್ತಿರುವ ಮಳೆ ಅ.18ರ ವರೆಗೂ ಮುಂದುವರಿಯಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ. ಅ.17, 18ರ ನಂತರ ಮಳೆಯ ಪ್ರಮಾಣ ಇಳಿಕೆಯಾಗುವ ಮುನ್ಸೂಚನೆಗಳು ಕಂಡುಬರುತ್ತಿವೆ. ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೆ, ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗುತ್ತಿಲ್ಲ. ಈ ಭಾಗದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾಗುತ್ತಿಲ್ಲ ಎಂದು ಹೇಳಿದರು.
ಕಳೆದ ಎರಡೂವರೆ ತಿಂಗಳಿನಿಂದ ಉತ್ತಮ ಮಳೆಯಾಗುತ್ತಿದ್ದು, ಹಲವೆಡೆ ಕುಂಭದ್ರೋಣ ಮಳೆಯೂ ಆಗಿದೆ. ಇದರಿಂದ ಕಳೆದ ನಾಲ್ಕೈದು ವರ್ಷಗಳಿಂದ ಬರದಿಂದ ಕಂಗೆಟ್ಟಿದ್ದ ರಾಜ್ಯದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ, ಬರ ಪೀಡಿತ ಪ್ರದೇಶಗಳ ಘೋಷಣೆ ಮಾಡಲು ಸಾಧ್ಯವಿಲ್ಲ. ಆದರೆ, ಮಳೆ ಕೊರತೆ, ಅತಿಯಾದ ಮಳೆಯಿಂದಲೂ ಬೆಳೆ ಹಾನಿಯಾಗಿದೆ. ಆದರೆ, ಹಲವು ಕೆರೆ-ಕಟ್ಟೆಗಳು ಭರ್ತಿಯಾಗಿದ್ದು, ಹಳ್ಳ-ಕೊಳ್ಳಗಳಲ್ಲಿ ನೀರು ಹರಿಯುತ್ತಿರುವುದರಿಂದ ಅಂತರ್ಜಲ ಗುಣಮಟ್ಟ ಗಣನೀಯವಾಗಿ ಸುಧಾರಿಸಲಿದೆ.  ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಋತುಮಾನದಲ್ಲಿ ಬೀಳುತ್ತಿದ್ದ ಮಳೆಗಿಂತಲೂ ಹೆಚ್ಚಿನ ಮಳೆ ಆಗಿದೆ. ಇಡೀ ಮಳೆಗಾಲದಲ್ಲೇ ಬೀಳುತ್ತಿದ್ದ ಮಳೆಯ ಪ್ರಮಾಣಕ್ಕಿಂತ ಹೆಚ್ಚಿನ ಮಳೆ ಕೇವಲ ಎರಡು ವಾರದಲ್ಲೇ ಬಿದ್ದಿದೆ. ಅಂದರೆ ಮೂರು ತಿಂಗಳ ಅವಧಿಯಲ್ಲಿ ಬೀಳುತ್ತಿದ್ದ ಮಳೆ ಅಲ್ಪಾವಧಿಯಲ್ಲೇ ಬಿದ್ದಿದೆ ಎಂದರು.

Facebook Comments

Sri Raghav

Admin