ವಿಧಾನಸೌಧ ವಜ್ರ ಮಹೋತ್ಸವ ಆಚರಣೆಗೆ ಯಾವುದೇ ತೊಡಕಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

K-B-Koliwada
ಬೆಂಗಳೂರು, ಅ.13-ವಿಧಾನಸೌಧ ನಿರ್ಮಿಸಿ 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಆಚರಿಸುತ್ತಿರುವ ವಜ್ರ ಮಹೋತ್ಸವ ಹಾಗೂ ಜಂಟಿ ಅಧಿವೇಶನ ಸಮಾರಂಭ ಸಂಬಂಧ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸರ್ಕಾರ ಮತ್ತು ನಮ್ಮ ನಡುವೆ ಸಮನ್ವಯತೆ ಇದೆ ಎಂದು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಸ್ಪಷ್ಟಪಡಿಸಿದರು. ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಜ್ರ ಮಹೋತ್ಸವ ಮತ್ತು ಜಂಟಿ ಅಧಿವೇಶನ ಆಚರಣೆ ಸಂಬಂಧ ಭಿನ್ನಾಭಿಪ್ರಾಯಗಳಿವೆ ಎಂಬ ಯಾವುದೇ ಆರೋಪಗಳಲ್ಲಿ ಹುರುಳಿಲ್ಲ. ನಮ್ಮ ಸರ್ಕಾರದ ನಡುವೆ ಯಾವುದೇ ತಿಕ್ಕಾಟವಿಲ್ಲ. ರಾಜ್ಯಪಾಲರು, ಮುಖ್ಯಮಂತ್ರಿಗಳು ಎಲ್ಲರೂ ಈ ಕಾರ್ಯಕ್ರಮಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಸುಸೂತ್ರವಾಗಿ ಈ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಅವರೇ ಒಪ್ಪಿಗೆ ನೀಡಿದ್ದರೆಂದ ಮೇಲೆ ಬೇರೆ ಯಾರೇ ಸಚಿವರು, ಏನೇ ಆರೋಪ ಮಾಡಿದರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿಶೇಷ ಜಂಟಿ ಅಧಿವೇಶನವನ್ನುದ್ದೇಶಿಸಿ ಅ.25ಕ್ಕೆ ಭಾಷಣ ಮಾಡಲಿದ್ದಾರೆ.
ವಿಶೇಷ ಸಂದರ್ಭಗಳಲ್ಲಿ ರಾಷ್ಟ್ರಪತಿಯವರು ಭಾಷಣ ಮಾಡುವುದೇನೂ ಹೊಸತಲ್ಲ. ಈ ಹಿಂದೆ ನಾಲ್ಕು ಬಾರಿ ರಾಷ್ಟ್ರಪತಿಗಳು ಭಾಷಣ ಮಾಡಿದ್ದಾರೆ. ರಾಷ್ಟ್ರಪತಿಗಳ ಭಾಷಣದ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಿಲ್ಲ. ಅಧಿವೇಶನ ವರ್ಷದ ಪ್ರಾರಂಭದಲ್ಲಿ ರಾಜ್ಯಪಾಲರು ಭಾಷಣ ಮಾಡಬೇಕು ಎಂಬ ನಿಯಮವಿದೆ. ವಿಶೇಷ ಸಂದರ್ಭದಲ್ಲಿ ರಾಷ್ಟ್ರಪತಿಗಳು ಭಾಷಣ ಮಾಡಬಹುದಾಗಿದೆ ಕೋಳಿವಾಡ ಸ್ಪಷ್ಟಪಡಿಸಿದರು. ವಜ್ರ ಮಹೋತ್ಸವ ಆಚರಣೆಗೆ ಸಂಬಂಧಿಸಿದಂತೆ 26.87 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಖರ್ಚು-ವೆಚ್ಚಗಳ ಬಗ್ಗೆ ಅಧಿಕಾರಿಗಳು ನಿರ್ವಹಣೆ ಮಾಡುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಕೆರೆ ಒತ್ತುವರಿ ಸದನ ಸಮಿತಿ ವರದಿ ಸಿದ್ಧವಾಗಿದೆ. ನಿನ್ನೆ ಸದನ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿದ್ದು, ಅವಕಾಶ ಸಿಕ್ಕರೆ ಜಂಟಿ ಅಧಿವೇಶನದಲ್ಲಿ ವರದಿ ಮಂಡನೆ ಮಾಡುತ್ತೇವೆ. ಅವಕಾಶ ಸಿಗದಿದ್ದರೆ ಬೆಳಗಾವಿ ಅಧಿವೇಶನದಲ್ಲಿ ಈ ವರದಿಯನ್ನು ಮಂಡಿಸುತ್ತೇವೆ ಎಂದು ಹೇಳಿದರು.

ಮಾಜಿ ಸಚಿವ ಸುರೇಶ್‍ಕುಮಾರ್ ಈ ಸಮಿತಿಗೆ ರಾಜೀನಾಮೆ ನೀಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಗುಸುಗುಸು ಎಂಬ ಕಾರಣ ನೀಡಿದ್ದಾರೆ. ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದನ್ನು ನೀವೇ ಅವರನ್ನು ಕೇಳಿ ಎಂದು ಕೋಳಿವಾಡ ಹೇಳಿದರು.
ಶಾಸಕ ಶಿವಮೂರ್ತಿ ನಾಯಕ್ ಹಾಗೂ ಐಎಎಸ್ ಅಧಿಕಾರಿ ರಾಜೇಂದ್ರಕುಮಾರ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದ ವಿವಾದವನ್ನು ಬಗೆಹರಿಸಲಾಗುವುದು ಎಂದು ಕೋಳಿವಾಡ ತಿಳಿಸಿದರು. ಇಂದೇ ಮಾತುಕತೆ ನಡೆಸಲು ಮುಂದಾಗಿದ್ದೆವು. ಆದರೆ ಅಧಿಕಾರಿಯವರು ನವದೆಹಲಿಯಲ್ಲಿರುವುದರಿಂದ ನಾಳೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ಹೇಳಿದರು.

Facebook Comments