ಗೌರಿ ಲಂಕೇಶ್’ರನ್ನು ಕೊಂದ ಶಂಕಿತ ಹಂತಕರ ರೇಖಾಚಿತ್ರ, ವೀಡಿಯೋ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Gouri-Lankesh-Killers-02
ಬೆಂಗಳೂರು, ಅ.14- ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಸಂಬಂಧ ಯಾವುದೇ ಸುಳಿವು ಸಿಗದೇ ಇದ್ದುದರಿಂದ ಕೊನೆಗೆ ಸಾರ್ವಜನಿಕರ ಮೊರೆ ಹೋಗಿರುವ ವಿಶೇಷ ತನಿಖಾ ದಳ ಇಂದು ಇಬ್ಬರು ಶಂಕಿತ ಆರೋಪಿಗಳ ರೇಖಾ ಚಿತ್ರ ಮತ್ತು ವೀಡಿಯೋ ದೃಶ್ಯಾವಳಿ ಬಿಡುಗಡೆ ಮಾಡಿದೆ.
ಪತ್ರಿಕಾಗೋಷ್ಠಿಯಲ್ಲಿಂದು ವಿಶೇಷ ತನಿಖಾ ದಳದ ಐಜಿ ವಿ.ಕೆ.ಸಿಂಗ್, ಡಿಸಿಪಿ ಅನುಚೇತ್ ಮತ್ತು ಎಸ್‍ಪಿ ಹರೀಶ್‍ಪಾಂಡೆ, ಇಬ್ಬರು ಶಂಕಿತ ಆರೋಪಿಗಳ ಮೂರು ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಿದರು.

ಈ ಆರೋಪಿಗಳು ಗೌರಿ ಹತ್ಯೆಗೂ ಮುನ್ನ ಒಂದು ವಾರ ಬೆಂಗಳೂರಿನಲ್ಲೇ ನೆಲೆಸಿದ್ದ  ಶಂಕೆ ಇದೆ. ಹತ್ಯೆ ದಿನ ಗೌರಿಲಂಕೇಶ್ ಅವರ ಮನೆ ಸುತ್ತಮುತ್ತ ಬೈಕ್‍ನಲ್ಲಿ ಒಬ್ಬ ವ್ಯಕ್ತಿ ಅನುಮಾನಸ್ಪದವಾಗಿ ಓಡಾಡಿದ್ದಾನೆ. ಈ ರೇಖಾ ಚಿತ್ರಗಳನ್ನು ಸಿಸಿ ಟಿವಿ ದೃಶ್ಯಾವಳಿಗಳು ಮತ್ತು ಪ್ರತ್ಯಕ್ಷ ದರ್ಶಿಗಳ ಮಾಹಿತಿ ಆಧರಿಸಿ ನಿಪುಣ ಕಲಾವಿದರುಗಳು 48 ಗಂಟೆಗಳ ಕಾಲ ಒಂದು ಚಿತ್ರವನ್ನು ಬಿಡಿಸಿದ್ದಾರೆ.  ಇದು ನರೇಂದ್ರ ದಾಬೋಲ್ಕರ್ ಪ್ರಕರಣದಲ್ಲಿ ಸಿಬಿಐ ಬಿಡುಗಡೆ ಮಾಡಿರುವ ಶಂಕಿತ ಆರೋಪಿಗಳ ರೇಖಾ ಚಿತ್ರಗಳಿಗಿಂತಲೂ ಹೆಚ್ಚು ಗುಣಮಟ್ಟ ಹೊಂದಿವೆ.

ಹೀಗಾಗಿ ಸಾರ್ವಜನಿಕರು ರೇಖಾ ಚಿತ್ರಗಳಲ್ಲಿರುವ ವ್ಯಕ್ತಿಗಳನ್ನು ನೋಡಿದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಅವರು ವಾಸಿಸುತ್ತಿದ್ದ ಮನೆಗಳ ಸುತ್ತಮುತ್ತಲಿನ ಸಾರ್ವಜನಿಕರು, ಹೋಟೆಲ್‍ನಲ್ಲಿ ತಂಗಿದ್ದರೆ ಅಲ್ಲಿ ನೋಡಿರುವವರು ತಮಗೆ ಮಾಹಿತಿ ನೀಡುವಂತೆ ಸಿಂಗ್ ಮನವಿ ಮಾಡಿದರು.
ಜತೆಗೆ ಆರೋಪಿಗಳು ಬಳಸಿದ ಮೋಟಾರ್ ಬೈಕ್‍ನ ಮಾಹಿತಿ ಬಹಿರಂಗ ಪಡಿಸಲಾಗಿದ್ದು, ಅದರ ಬಗ್ಗೆಯೂ ಸಾರ್ವಜನಿಕರು ತಮಗೆ ತಿಳಿದಿರುವ ವಿಷಯವನ್ನು ಹಂಚಿಕೊಳ್ಳಬೇಕೆಂದು ಮನವಿ ಮಾಡಿದರು.

ಆಯುಧಗಳಲ್ಲಿ ಸಾಮ್ಯತೆ ಇಲ್ಲ:

ಎಂ.ಎಂ.ಕಲಬುರಗಿ, ನರೇಂದ್ರ ದಾಬೋಲ್ಕರ್ ಹತ್ಯೆಯಲ್ಲಿ ಬಳಸಲಾದ ಬಂದೂಕು ಮತ್ತು ಗುಂಡಿಗೂ ಹಾಗೂ ಗೌರಿ ಹತ್ಯೆಯಲ್ಲಿ ಬಳಸಲಾದ ಆಯುಧಕ್ಕೂ ಸಾಮ್ಯತೆ ಕಂಡು ಬಂದಿಲ್ಲ. ಈ ಬಗ್ಗೆ ನಿಖರವಾದ ಮಾಹಿತಿಗಳು ಸಿಕ್ಕಿಲ್ಲ. ಗೌರಿ ಹತ್ಯೆಗೆ 7.65ಕಂಟ್ರಿಮೇಡ್ ಪಿಸ್ತೂಲನ್ನು ಬಳಸಿರುವುದು ಸ್ಪಷ್ಟ ಎಂದು ಹೇಳಿದರು. ಕಲಬುರ್ಗಿ ಸೇರಿದಂತೆ ಇತರ ವಿಚಾರವಾದಿಗಳ ಹತ್ಯೆಗೂ ಗೌರಿ ಲಂಕೇಶ್ ಹತ್ಯೆಗೂ ಸಂಬಂಧ ಇರುವ ಬಗ್ಗೆ ಕಲವು ಸಾಮ್ಯತೆಗಳಿವೆ. ಅದೇ ರೀತಿ ಬಹಳಷ್ಟು ಹೋಲಿಕೆಗಳೂ ವ್ಯತಿರಿಕ್ತವಾಗಿವೆ ಎಂದು ಅವರು ಸ್ಪಷ್ಟಪಡಿಸಿದರು.

ಹತ್ಯೆಗೆ ವೃತ್ತಿ ದ್ವೇಷ ಕಾರಣವಲ್ಲ:

ಗೌರಿ ಲಂಕೇಶ್ ಹತ್ಯೆಗೆ ವೃತ್ತಿಪರ ವೈಷಮ್ಯಗಳು ಕಾರಣ ಅಲ್ಲ ಎಂದು ಸುದೀರ್ಘ ತನಿಖೆ ನಡೆಸಿರುವ ಎಸ್‍ಐಟಿ ಸ್ಪಷ್ಟಪಡಿಸಿದೆ. ಪ್ರಕರಣವನ್ನು ವಿವಿಧ ದೃಷ್ಟಿಕೋನಗಳಿಂದ ತನಿಖೆ ನಡೆಸಲಾಗುತ್ತಿದೆ. ವೈಯಕ್ತಿಕ ಕಾರಣಗಳು, ಅವರು ವಿವಿಧ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಕುರಿತು ಹಾಗೂ ವೃತ್ತಿ ಹಿನ್ನೆಲೆಯಲ್ಲಿಯೂ ತನಿಖೆ ನಡೆಸಲಾಗಿದೆ. ಆದರೆ, ಈವರೆಗೂ ನಡೆದ ವಿಚಾರಣೆ ಮತ್ತು ದೊರೆತ ಸಾಕ್ಷಿಗಳ ಆಧಾರದ ಮೇಲೆ ಈ ಹತ್ಯೆ ವೃತ್ತಿ ವೈಷಮ್ಯದಿಂದ ನಡೆದಿಲ್ಲ ಎಂದು ಸ್ಪಷ್ಟವಾಗಿ ಹೇಳಬಯಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು. ಉಳಿದಂತೆ ವ್ಯಕ್ತಿಗತ ಕಾರಣಗಳಿಗೆ ಹತ್ಯೆಯಾಗಿಲ್ಲ ಎಂದು ಹೇಳಲು ಇಚ್ಚಿಸುವುದಿಲ್ಲ. ಎಲ್ಲಾ ದೃಷ್ಟಿಕೋನಗಳಿಂದಲೂ ತನಿಖೆ ನಡೆಸುತ್ತಿರುವುದರಿಂದ ಸದ್ಯಕ್ಕೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಸಿಂಗ್ ಹೇಳಿದರು.

250 ಮಂದಿ ವಿಚಾರಣೆ:

ಗೌರಿ ಹತ್ಯೆ ಆದ ನಂತರ ರಾಜ್ಯ ಸರ್ಕಾರ ತನಿಖೆಗಾಗಿ ವಿಶೇಷ ದಳವನ್ನು ರಚನೆ ಮಾಡಿದೆ. ಅದರಲ್ಲಿ ನೂರಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಈವರೆಗೂ ಎಸ್‍ಐಟಿ 250 ಮಂದಿಯನ್ನು ತನಿಖೆಗೆ ಒಳಪಡಿಸಿರುವುದಾಗಿ ಸ್ಪಷ್ಟಪಡಿಸಿದೆ. ಆದರೆ, ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಿದರು.

ಅಗತ್ಯ ಕಂಡು ಬಂದರೆ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳ ನೆರವನ್ನು ತನಿಖೆಗೆ ಬಳಸಿಕೊಳ್ಳಲು ಎಸ್‍ಐಟಿ ಸಿದ್ದವಿದೆ ಎಂದು ಸಿಂಗ್ ಹೇಳಿದರು.
ಆರೋಪಿ ಹೆಲ್ಮೆಟ್ ಧರಿಸಿ ಬೈಕ್‍ನಲ್ಲಿ ಓಡಾಡಿದ್ದಾನೆ. ಅಲ್ಲೊಮ್ಮೆ ಇಲ್ಲೊಮ್ಮೆ ಹೆಲ್ಮೆಟ್ ಅಳವಡಿಸಲಾಗಿದ್ದ ಮುಂಭಾಗದ ಗ್ಲಾಸನ್ನು ತೆಗೆದಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಆಧರಿಸಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ಪ್ರತ್ಯಕ್ಷ ದರ್ಶಿಗಳ ಮಾಹಿತಿ ಆಧರಿಸಿ ನಿಖರವಾದ ಶಂಕಿತ ಆರೋಪಿಗಳ ಚಿತ್ರ ಬಿಡಿಸಲಾಗಿದೆ.

ಈ ಆರೋಪಿಗಳು 25ರಿಂದ 30 ವರ್ಷ ವಯೋಮಾನದವರಾಗಿದ್ದಾರೆ. ಹತ್ಯೆಯ ನಂತರ ಹಾಗೂ ಹತ್ಯೆಯ ಮುನ್ನ ಈ ವ್ಯಕ್ತಿಗಳನ್ನು ನೋಡಿದವರಿದ್ದರೆ ಎಸ್‍ಐಟಿಯ ವಿಳಾಸವಾದ ಕೊಠಡಿ ಸಂಖ್ಯೆ 104, ವಿಶೇಷ ತನಿಖಾ ತಂಡ, ಸಿಐಡಿ ಕಚೇರಿ, ಬೆಂಗಳೂರು. ಮೊಬೈಲ್ ಸಂಖ್ಯೆ 9480800202ಗೆ ಮಾಹಿತಿ ನೀಡಬೇಕು. ವಾಟ್ಸ್‍ಆಪ್ ನಂಬರ್ 9480800304, 9480801701. ಇಮೇಲ್ ವಿಳಾಸ sit.glankesh@ksp.gov.in ಇಲ್ಲಿಗೆ ಮಾಹಿತಿ ನೀಡುವಂತೆ ಎಸ್‍ಐಟಿ ಮನವಿ ಮಾಡಿದೆ.

Facebook Comments

Sri Raghav

Admin