ನ.2 ರಂದು ಗೌಡರು ಪ್ರಧಾನಿಯಾಗಿ ಮಾಡಿದ ಸಾಧನೆಗಳ ಕುರಿತ ಪುಸ್ತಕ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Devegowda-nJDS---01

ಬೆಂಗಳೂರು, ಅ.15- ದೇಶದ ಪ್ರಧಾನಿಯಾಗಿ ತಾವು ಮಾಡಿದ ಸಾಧನೆ ಕುರಿತ ಮೊದಲ ಪುಸ್ತಕ ನ.2ರಂದು ಬಿಡುಗಡೆಯಾಗಲಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಪೀಣ್ಯ ಕೈಗಾರಿಕಾ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಗೌಡರು, ಪ್ರಧಾನಿಯಾಗಿ ದೇಶದಲ್ಲಿ ಮಾಡಿದ ಸಾಧನೆಯ ಅನಾವರಣವಾಗುತ್ತಿದೆ. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ಗುಣಗಾನವನ್ನು ಎಲ್ಲರೂ ಮಾಡುತ್ತಿದ್ದಾರೆ. ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ಏನು ಕೆಲಸ ಮಾಡಿದ್ದೀರಿ ಎಂದು ಹಲವರು ಪ್ರಶ್ನೆ ಮಾಡುತ್ತಾರೆ. ಅಂತಹವರಿಗೆ ಜಿಂದಾಲ್‍ನಂತಹ ಕೈಗಾರಿಕೆ ಸೃಷ್ಟಿಯಾಗಲು ಯಾರು ಕಾರಣ, ಬೆಂಗಳೂರಿನ ಐಟಿ-ಬಿಟಿಗೆ ಉತ್ತೇಜನ ನೀಡಿದ್ದು ಯಾರು, ಐಟಿಪಿಎಲ್ ಸ್ಥಾಪನೆ ಮಾಡಿದವರು ಯಾರು ಎಂದು ಪ್ರಶ್ನಿಸಿದರು.

ಬೆಂಗಳೂರು ನಗರಕ್ಕೆ ಮೊದಲ ವರ್ತುಲ ರಸ್ತೆ, ಮೇಲ್ಸೇತುವೆ, ಕೆಳಸೇತುವೆಗಳನ್ನು ಪ್ರಾರಂಭಿಸಿದ್ದು ಯಾರು, ನಗರಕ್ಕೆ ಕಾವೇರಿ 4ನೇ ಹಂತದ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಿದ್ದು ಯಾರು ಎಂದು ಮರು ಪ್ರಶ್ನಿಸಿದರು. ಹಳ್ಳಿಯ ರೈತನ ಮಗನ ಹೋರಾಟ ಹೇಗಿದೆ ಎಂಬುದು ಗೊತ್ತಾಗಲಿದೆ. ಹಳ್ಳಿಯಿಂದ ಬಂದವರಿಗೆ ಬದುಕಬೇಕೆಂಬ ಛಲವಿರಬೇಕು. ಹಿನ್ನಡೆ ಉಂಟಾದಾಗ ಎದೆಗುಂದಬಾರದು ಎಂದು ಉದ್ಯಮಿಗಳಿಗೆ ಸಲಹೆ ನೀಡಿದರು.

ದೇಶದ ಸಣ್ಣ, ಮಧ್ಯಮ ಹಾಗೂ ಸೂಕ್ಷ್ಮ ಕೈಗಾರಿಕೆಗಳು ಸಾಕಷ್ಟು ಸಂಕಷ್ಟದಲ್ಲಿ ಸಿಲುಕಿವೆ. ಮುಖ್ಯಮಂತ್ರಿಯಾಗಿ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಬಂದಾಗ ಪರಿಸ್ಥಿತಿ ಸರಿಯಿರಲಿಲ್ಲ. ಸೂಕ್ತ ಮೂಲಸೌಲಭ್ಯಗಳಿರಲಿಲ್ಲ. ಕೇವಲ ಐದು ತಿಂಗಳಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸಿದ್ದೇ ಅಲ್ಲದೆ, ಮೂಲ ಸೌಲಭ್ಯ ಒದಗಿಸಲಾಯಿತು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೋಕಸಭೆ ಸದಸ್ಯರಾಗಿದ್ದಾಗ ಪೀಣ್ಯಾ ಕೈಗಾರಿಕಾ ಪ್ರದೇಶದ ಉದ್ಯಮಿಗಳ ಸಂಕಷ್ಟಕ್ಕೆ ಸ್ಪಂದಿಸಿ ಸೂಕ್ತ ಮೂಲ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದರು ಎಂದರು.

ಆನಂತರ ಬಂದ ಸರ್ಕಾರಗಳು ಇಲ್ಲಿನ ಜನರಿಗೆ ಸ್ಪಂದಿಸಲಿಲ್ಲ ಎಂಬುದು ನೋವಿನ ಸಂಗತಿ. ಈ ಕೈಗಾರಿಕಾ ಪ್ರದೇಶ ಏಷ್ಯಾ ಖಂಡದಲ್ಲೇ ದೊಡ್ಡ ಪ್ರದೇಶವಾಗಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಸೂಕ್ತ ನೆರವು ನೀಡಿದ್ದರು. ಸರ್ಕಾರದ ಸೂಕ್ತ ಪ್ರೋತ್ಸಾಹವಿಲ್ಲದೆ ಹರಾಜು ಮಾಡುವ ಸ್ಥಿತಿಗೆ ಕೈಗಾರಿಕೆಗಳು ಬಂದಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಣ್ಣ ಕೈಗಾರಿಕಾ ಕ್ರಾಂತಿಗೆ ಶಕ್ತಿ ತುಂಬಬೇಕೆಂದು ಸಲಹೆ ನೀಡಿದರು. ತಾವು ಡ್ರೈಕ್ಲೀನರ್ ಆಗಲಿ, ಮೆಕ್ಯಾನಿಕಲ್ ಶಾಪ್, ವ್ಯವಸಾಯ ಸೇರಿದಂತೆ ಉದ್ಯಮ ಆರಂಭಿಸಲು ಹಲವರಿಗೆ ಧನ ಸಹಾಯ ಮಾಡಿದ್ದು, ಅವರು ಈಗ ಲಕ್ಷಾಧೀಶರಾಗಿದ್ದಾರೆ. ರಾಜ್ಯದ ಜನರ ಹಿತದೃಷ್ಟಿಯಿಂದ ಸಮಗ್ರ ಅಭಿವೃದ್ಧಿಗಾಗಿ 2018ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಉದ್ಯಮಿಗಳಲ್ಲಿ ಮನವಿ ಮಾಡಿದರು.

ಕೈಗಾರಿಕೋದ್ಯಮಿ ಬಿ.ಟಿ.ವೆಂಕಟೇಶ್ ಮಾತನಾಡಿ, ಸಣ್ಣ, ಅತಿಸಣ್ಣ ಹಾಗೂ ಸೂಕ್ಷ್ಮ ಕೈಗಾರಿಕೆಗಳು ಹತ್ತಾರು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕುಗಳು ಸಾಲವನ್ನು ರೀಷೆಡ್ಯೂಲ್ ಮಾಡುವಂತೆ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರದ ಗಮನ ಸೆಳೆಯುವಂತೆ ದೇವೇಗೌಡರಲ್ಲಿ ಮನವಿ ಮಾಡಿದರು. ಜೆಡಿಎಸ್ ಕೈಗಾರಿಕಾ ಉದ್ಯಮಿಗಳ ವಿಭಾಗದ ಅಧ್ಯಕ್ಷ ಟಿ.ಆರ್.ಪ್ರಸಾದ್‍ಗೌಡ ಮಾತನಾಡಿ, ರೈತರಂತೆ ಕೈಗಾರಿಕೋದ್ಯಮಿ ಕೂಡ ಕಾರ್ಮಿಕರಿಗೆ ಉದ್ಯೋಗ ನೀಡುವ ಅನ್ನದಾತ. 99 ವರ್ಷಗಳಿದ್ದ ಗುತ್ತಿಗೆ ಅವಧಿಯನ್ನು 10 ವರ್ಷಗಳಿಗೆ ಇಳಿಸಲು ಕುಮಾರಸ್ವಾಮಿ ಸದನದಲ್ಲಿ ಸುದೀರ್ಘ ಹೋರಾಟ ಮಾಡಿದ್ದರು ಎಂದರು.

ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಬೆಂಗಳೂರು ನಗರ ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಕಾಸಿಯಾ ಅಧ್ಯಕ್ಷ ಹನುಮಂತೇಗೌಡ, ಉದ್ಯಮಿ ಟಿ.ಜಯರಾಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.

Facebook Comments

Sri Raghav

Admin