ಬ್ಲಾಕ್ ಮನಿ, ತೆರಿಗೆ ವಂಚನೆ ಆಯ್ತು ಈಗ ಮಾದಕ ವಸ್ತುಗಳ ವಿರುದ್ಧ ಸರ್ಜಿಕಲ್ ಸ್ಟ್ರೈಕ್..!

ಈ ಸುದ್ದಿಯನ್ನು ಶೇರ್ ಮಾಡಿ

Modi-Govt--02

ನವದೆಹಲಿ, ಅ.15- ಭ್ರಷ್ಟಾಚಾರ, ಕಾಳಧನ ಮತ್ತು ತೆರಿಗೆ ವಂಚನೆ ವಿರುದ್ಧ ಹೋರಾಟ ತೀವ್ರಗೊಳಿಸಿ ತಕ್ಕ ಮಟ್ಟಿಗೆ ಯಶಸ್ಸು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗ ದೇಶದಲ್ಲಿ ಚಾಚಿರುವ ಮಾದಕ ವಸ್ತುಗಳ ಕಬಂಧ ಬಾಹುಗಳನ್ನು ನಿರ್ಮೂಲನೆ ಮಾಡಲು ಸಜ್ಜಾಗಿದೆ.
ಮಾದಕ ದ್ರವ್ಯಗಳ ಕಳ್ಳ ಸಾಗಣೆ ಜಾಲವನ್ನು ಬೇರು ಸಮೇತ ಕಿತ್ತೊಗೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಅತಿ ಶೀಘ್ರದಲ್ಲೇ ಹೊಸ ರಾಷ್ಟ್ರೀಯ ನೀತಿ ಜಾರಿಗೊಳಿಸಲಿದೆ.

ಸಚಿವರ ಸಮೂಹ (ಗ್ರೂಪ್ ಆಫ್ ಮಿನಿಸ್ಟರ್ಸ್ ಅಥವಾ ಜಿಒಎಂ) ಸಲಹೆ ಮಾಡಿರುವಂತೆ ರಾಷ್ಟ್ರೀಯ ಮಾದಕ ವಸ್ತು ನಿರ್ಮೂಲನೆ ನೀತಿಯ ಪರಿಷ್ಕøತ ಕರಡು ಈಗ ಅಂತಿಮ ಅನುಮೋದನೆ ನಿರೀಕ್ಷೆಯಲ್ಲಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಇತ್ತೀಚೆಗೆ ಈ ಕರಡು ದಾಖಲೆಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಚಿವರ ಸಮಿತಿಗೆ ಈ ಸಂಬಂಧ ಸೂಚನೆ ನೀಡಿದ್ದು, ಕರಡು ನೀತಿಯನ್ನು ಪರಿಶೀಲಿಸುವಂತೆ ತಿಳಿಸಿದ್ದಾರೆ.

ಭಾರತದಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಅವುಗಳಿಂದ ಆಗುತ್ತಿರುವ ಗಂಭೀರ ಸಮಸ್ಯೆಗಳ ಮೂಲೋತ್ಪಾಟನೆಗಾಗಿ ಕೈಗೊಳ್ಳಬೇಕಾದ ತ್ವರಿತ ಕ್ರಮಗಳ ಕುರಿತು ಶಿಫಾರಸುಗಳನ್ನು ಮಾಡುವಂತೆಯೂ ಮೋದಿ ನಿರ್ದೇಶನ ನೀಡಿದ್ದಾರೆ. ಈ ಸಮಿತಿಯಲ್ಲಿ ಆರೋಗ್ಯ , ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರಿಗೆ ಮತ್ತು ಗೃಹ ವ್ಯವಹಾರಗಳ ಸಚಿವರು ಹಾಗೂ ಉನ್ನತಾಧಿಕಾರಿಗಳಿದ್ದಾರೆ.

ಜಾರಿಗೊಳಿಸಲು ಉದ್ದೇಶಿಸಲಾಗಿರುವ ಹೊಸ ರಾಷ್ಟ್ರೀಯ ನೀತಿಯಲ್ಲಿ ಕೆಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ. ಕ್ಯಾನಬಿಸ್, ಹೆರಾಯಿನ್ ಮತ್ತು ಅಫೀಮು ಸೇರಿದಂತೆ ಮಾದಕ ವಸ್ತುಗಳು ಹಾಗೂ ನಶೆ ಏರಿಸುವ ಔಷಧಿಗಳ (ಅರಿವಳಿಕೆ ಮತ್ತು ಆಘ್ರಾಣಿಸುವ ಪದಾರ್ಥಗಳು) ಸಂಪೂರ್ಣ ನಿಷೇಧ, ಡ್ರಗ್ಸ್ ಕಳ್ಳ ಸಾಗಣೆದಾರರಿಗೆ ಈಗಿರುವ ಶಿಕ್ಷೆಗಿಂತ ಕಠಿಣ ಕ್ರಮಗಳನ್ನು ಕೈಗೊಳ್ಳುವಿಕೆ ಹಾಗೂ ಮಾದಕ ವ್ಯಸನಿಗಳಿಗೆ ಪುನರ್ವಸತಿ ಈ ವಿಷಯಗಳನ್ನು ಮುಖ್ಯವಾಗಿ ಪ್ರಸ್ತಾಪಿಸಲಾಗಿದೆ. ಇಂಟರ್‍ನೆಟ್ ಔಷಧಗಳು ಒಳಗೊಂಡಂತೆ ಅಕ್ರಮ ಮಾದಕ ಪದಾರ್ಥಗಳು ಪೂರೈಕೆಯಾಗುವ ಮಾರ್ಗಗಳನ್ನು ಬಂದ್ ಮಾಡಲು ಸಂಬಂಧಪಟ್ಟ ಇಲಾಖೆಗಳ ನಡುವೆ ಪರಸ್ಪರ ಸಹಕಾರ ಮತ್ತು ಸಮನ್ವಯತೆಯನ್ನು ಮತ್ತಷ್ಟು ಬಲಗೊಳಿಸಲೂ ಸಹ ನೂತನ ಕರಡು ನೀತಿಯಲ್ಲಿ ಉದ್ದೇಶಿಸಲಾಗಿದೆ. (ಈ ಸಂಜೆ ಸುದ್ದಿ)

Facebook Comments

Sri Raghav

Admin