ಹೇಗಿದೆ ನೋಡಿ ಶಾಸಕರೊಬ್ಬರ ಸ್ವಗ್ರಾಮದ ಸ್ಥಿತಿ

ಈ ಸುದ್ದಿಯನ್ನು ಶೇರ್ ಮಾಡಿ

MLA--01

ಯಳಂದೂರು, ಅ.16- ಕೆಸರುಮಯವಾದ ರಸ್ತೆಗಳು, ಕುಡಿಯುವ ನೀರಿನೊಂದಿಗೆ ಚರಂಡಿಯ ಕಲುಷಿತ ನೀರು ಸೇರುವ ಭೀತಿ, ಗ್ರಾಮದ ಮಧ್ಯ ಭಾಗದಲ್ಲೇ ಇರುವ ದುರ್ವಾಸನೆ ಬೀರುವ ಕೊಳ್ಳ, ಮಳೆ ಬಂದರೆ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುವ ಕೊಳಚೆ ನೀರು, ಪ್ರತಿ ನಿತ್ಯ ಯಾತನಾಮಯ ಬದುಕು ಸಾಗಿಸುವ ಅನಿವಾರ್ಯತೆ. ಇದು ತಾಲ್ಲೂಕಿನ ದೊಡ್ಡ ಗ್ರಾಮವಾಗಿರುವ ಹಾಲಿ ಶಾಸಕರ ಗ್ರಾಮವಾಗಿರುವ ಮಾಂಬಳ್ಳಿ ಗ್ರಾಮದ ನಿತ್ಯ ಗೋಳು. 8 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಗ್ರಾಮದ ಮಧ್ಯ ಭಾಗದಲ್ಲಿ ಕುಂಬಾರಕಟ್ಟೆ ಎಂಬ ದೊಡ್ಡ ಕಟ್ಟೆ ಇದೆ. ಇದರ ಸುತ್ತಲೂ ಅನೇಕ ಬಡಾವಣೆಗಳಿದ್ದು ಪ್ರತಿನಿತ್ಯ ಇಲ್ಲಿ ಗ್ರಾಮದ ಕೊಳಚೆ ನೀರು ಶೇಖರಣೆಗೊಳ್ಳುತ್ತದೆ. ಈ ನೀರನ್ನು ಹೊರ ಹಾಕಲು ಗ್ರಾಮ ಪಂಚಾಯಿತಿ ವತಿಯಿಂದ ಮೋಟಾರ್ ಅಳವಡಿಸಿದ್ದರೂ ಇದರ ಸಮರ್ಪಕ ನಿರ್ವಹಣೆ ಇಲ್ಲದೆ ನೀರು ಇದ್ದಲ್ಲೇ ಇದೆ.

ಕಳೆದ ಹಲವು ದಿನಗಳಿಂದ ಮಳೆ ಜೋರಾಗಿದ್ದು, ಇಲ್ಲಿನ ಗೌಸಿಯಾ ಮೊಹಲ್ಲಾದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗುತ್ತದೆ. ಇದರೊಂದಿಗೆ ಹಾವು, ಕ್ರಿಮಿ ಕೀಟಗಳು, ಹುಳುಗಳು ಮನೆ ಹೊಕ್ಕುವುದರಿಂದ ರಾತ್ರಿ ವೇಳೆ ಮಳೆ ಬಂದರೆ ಇಡೀ ಕುಟುಂಬ ಜಾಗರಣೆಯಲ್ಲೇ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗುತ್ತದೆ. ಕುಡಿಯುವ ನೀರಿನ ಪೈಪನ್ನು ಚರಂಡಿಯ ಒಳಗಿನಿಂದ ಅಳವಡಿಸಿದ್ದು, ಕಲುಷಿತ ನೀರು ಸೇವನೆ ಮಾಡುವ ಸ್ಥಿತಿ ಇದೆ.

ಈ ಬಡಾವಣೆಯಲ್ಲಿ ಕಳೆದ 4 ವರ್ಷಗಳಿಂದ ಒಂದು ಬೀದಿಗೆ ಮಾತ್ರ ರಸ್ತೆ ನಿರ್ಮಾಣ ಮಾಡ ಲಾಗಿದೆ. ಉಳಿದ ಬೀದಿಗಳಲ್ಲಿ ಮಂಡಿ ಮಟ್ಟದ ಹಳ್ಳಗಳು ಬಿದ್ದಿದ್ದು ಕೆಸರು ಮಯ ನೀರು ಇಲ್ಲೇ ಶೇಖರಣೆಗೊಳ್ಳುತ್ತದೆ. ಇದನ್ನು ತುಳಿದುಕೊಂಡೇ ಇಲ್ಲಿನ ಮಕ್ಕಳು ಶಾಲೆಗೆ ತೆರಳುವ ಸ್ಥಿತಿ ಇದೆ ಎಂಬುದು ತಾಪಂನ ಮಾಜಿ ಅಧ್ಯಕ್ಷ ಜೆ.ಶಕೀಲ್ ಅಹಮ್ಮದ್‍ರವರ ದೂರು. ಕುಂಬಾರ ಕಟ್ಟೆಯಲ್ಲಿ ನೀರು ನಿಲ್ಲದ ಹಾಗೆ ಮಾಡಿ. ಉತ್ತಮ ರಸ್ತೆ, ಚರಂಡಿ ನಿರ್ಮಿಸಿ ರೋಗರುಜಿನ ತಪ್ಪಿಸಿ ಎಂಬುದು ಇಲ್ಲಿನ ನಿವಾಸಿ ಚಂದ್ರಮ್ಮ, ಅನ್ವರ್ ಸೇರಿದಂತೆ ಹಲವರ ಆಗ್ರಹವಾಗಿದೆ.

Facebook Comments

Sri Raghav

Admin