18 ವರ್ಷಗಳ ನಂತರ ಅಮಾನಿಕೆರೆಗೆ ನೀರು

ಈ ಸುದ್ದಿಯನ್ನು ಶೇರ್ ಮಾಡಿ

tumakuru
ತುಮಕೂರು, ಅ.16- ಬರದ ಬೇಗೆಯಿಂದ ತತ್ತರಿಸಿದ್ದ ಜಿಲ್ಲೆಗೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಹುತೇಕ ಕೆರೆಗಳು ಕೋಡಿ ಬಿದ್ದಿದ್ದು, ವಿಶೇಷವೆಂದರೆ 18 ವರ್ಷಗಳ ನಂತರ ಅಮಾನಿಕೆರೆ ತುಂಬಿರುವುದು ಸ್ಥಳೀಯರಲ್ಲಿ ಹಾಗೂ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇದರಿಂದಾಗಿ ಶಾಸಕ ರಫೀಕ್ ಅಹಮದ್ ಕೂಡ ಸಂತಸಗೊಂಡಿದ್ದು, ಇಂದು ಬುಗಡನಹಳ್ಳಿ ಕೆರೆಯಿಂದ ಅಮಾನಿ ಕೆರೆಗೆ ಪೈಪ್‍ಲೈನ್ ಮೂಲಕ ಬರುವ ನೀರನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದ ಸಾಕಷ್ಟು ನೀರು ಕೆರೆಗೆ ಬಂದಿದೆ. ಇದರ ಜತೆಗೆ ಬುಗಡನಹಳ್ಳಿ ಕೆರೆಯಿಂದ ಪೈಪ್‍ಲೈನ್ ಮುಖಾಂತರವೂ ಸಹ ಕಳೆದ ಎರಡು ದಿನಗಳಿಂದ ನೀರನ್ನು ಹರಿಸಲಾಗುತ್ತಿದೆ. ಈಗಾಗಲೇ ಬುಗಡನಹಳ್ಳಿ ಕೆರೆ ತುಂಬಿದ್ದು, ಇಲ್ಲಿಂದ ಹೆಬ್ಬಾಕದ ಕೆರೆಗೆ ನೀರು ಹರಿಸಲಾಗುತ್ತಿದೆ. ಇನ್ನು ಎರಡು ವರ್ಷಗಳ ಕಾಲ ಪಾಲಿಕೆಯ 35 ವಾರ್ಡ್‍ಗಳು ಸೇರಿದಂತೆ ಮೂರೂವರೆ ಲಕ್ಷ ಜನರಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ ಎಂದರು.

ಈ ಬಾರಿ ಮಳೆ ಬಾರದೆ ಇದ್ದರೆ ಕುಡಿಯುವ ನೀರಿಗೂ ತುಂಬಾ ತತ್ವಾರವಾಗಿತ್ತು. ವರುಣನ ಕೃಪೆಯಿಂದ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಹೇಮಾವತಿ ನಾಲೆಯಿಂದ ನೀರು ಹರಿಯುವವರೆಗೂ ಅಮಾನಿಕೆರೆಗೆ ನೀರು ಹರಿಸಲಾಗುತ್ತದೆ. ಇನ್ನು 8 ಅಡಿಯಷ್ಟೇ ಬಾಕಿ ಇದೆ. ಮೇಯರ್ ರವಿಕುಮಾರ್ ಹಾಗೂ ಪಾಲಿಕೆ ಸದಸ್ಯರುಗಳು ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು ಪ್ರಯತ್ನ ಮಾಡುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಬೃಹದಾಕಾರದ ಗುಂಡಿ ಬಿದ್ದಿದ್ದು, ಇದರಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತವೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ನಮಗೆ ನಾಗರಿಕರ ರಕ್ಷಣೆ ಮುಖ್ಯ.

ಈಗಾಗಲೇ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಳೆಯಿಂದ ಕಾಮಗಾರಿಗೆ ತೊಂದರೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 48 ರಸ್ತೆಯಿಂದ ಶಿವಕುಮಾರ ಸ್ವಾಮೀಜಿ ವೃತ್ತ, ಅಮಾನಿಕೆರೆ ಹಿಂಭಾಗ, ಶಿರಾ ಗೇಟ್‍ವರೆಗಿನ ರಸ್ತೆಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರುವುದರಿಂದ ಸದ್ಯದಲ್ಲಿಯೇ ನಾಲ್ಕು ಪಥದ ರಸ್ತೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಈಗಾಗಲೇ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು. ಟೂಡಾ ಸದಸ್ಯ ಆಟೋ ರಾಜು ಮಾತನಾಡಿ, ನಾವು ಜನಪರವಾಗಿ ಕೆಲಸ ಮಾಡುತ್ತೇವೆ. ಮಾತು ಕಡಿಮೆ ಮಾಡಿ ಕೆಲಸ ಜಾಸ್ತಿ ಮಾಡುತ್ತೇವೆ ಎಂದು ಮಾಜಿ ಸಚಿವರೊಬ್ಬರ ಹೆಸರು ಹೇಳದೆ ಚೇಡಿಸಿದರು.

Facebook Comments