ಜಿಎಸ್‍ಟಿ ಎಫೆಕ್ಟ್ ನಿಂದ ಜೇಬು ಸುಡಲಿದೆ ಪಟಾಕಿ

ಈ ಸುದ್ದಿಯನ್ನು ಶೇರ್ ಮಾಡಿ

Crackers-02

ಮೈಸೂರು, ಅ.17- ಜಿಎಸ್‍ಟಿಯಿಂದ ಈ ಬಾರಿ ಪಟಾಕಿ ಸಾರ್ವಜನಿಕರ ಜೇಬು ಸುಡಲಿದೆ. ಒಂದು ದೇಶ-ಒಂದು ತೆರಿಗೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಈ ಬಾರಿ ಕಳೆದ ಬಾರಿಗಿಂತ ಪಟಾಕಿಗೆ ಅತಿ ಹೆಚ್ಚು ಬೆಲೆ ತೆರಬೇಕಾಗಿದೆ. ಪಟಾಕಿಗಳ ಮೇಲೆ ಶೇ.28ರಷ್ಟು ಜಿಎಸ್‍ಟಿ ವಿಧಿಸುವುದರಿಂದ ಅತ್ಯಧಿಕ ಹಣ ತೆತ್ತು ಪಟಾಕಿ ಖರೀದಿಸಬೇಕಾಗಿದೆ.  ಅಷ್ಟೇ ಅಲ್ಲ. ತಮಿಳುನಾಡಿನಲ್ಲಿ ಸತತವಾಗಿ ಮಳೆ ಬರುತ್ತಿರುವುದರಿಂದ ಶಿವಕಾಶಿಯಲ್ಲಿ ಪಟಾಕಿ ಉತ್ಪಾದನೆ ಕಡಿಮೆಯಾಗಿದೆ. ಇದೆಲ್ಲದರ ಜತೆಗೆ ಈ ಹಿಂದಿನ ವರ್ಷಗಳಲ್ಲಿ ಚೈನಾದಿಂದ ಪಟಾಕಿ ತರಿಸಲಾಗುತ್ತಿತ್ತು. ಆದರೆ, ಈ ಬಾರಿ ಚೈನಾ ಪಟಾಕಿ ಮಾರುಕಟ್ಟೆಗೆ ಬಾರದಂತೆ ನಿರ್ಬಂಧ ಹೇರಲಾಗಿದೆ. ಹಾಗಾಗಿ ಪಟಾಕಿ ಪ್ರಿಯರು ಅತಿ ಹೆಚ್ಚು ಹಣ ಕೊಟ್ಟು ಖರೀದಿಸಬೇಕಾಗಿದೆ.

ಪಟಾಕಿ ಮಳಿಗೆಗಳನ್ನು ತೆರೆಯಲು ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಕಟ್ಟುನಿಟ್ಟಿನ ನಿಯಮಗಳನ್ನು ಸಹ ಅನುಸರಿಸಬೇಕಾಗಿದೆ. ಕೆಇಬಿ, ಅಗ್ನಿಶಾಮಕದಳ ಹಾಗೂ ಪೊಲೀಸರ ಅನುಮತಿ ಪಡೆದು ಪಟಾಕಿ ಮಳಿಗೆ ತೆರೆಯಬೇಕಾಗಿದೆ. ಹಿಂದೆ ಖಾಲಿ ಜಾಗದಲ್ಲಿ ಮಳಿಗೆ ತೆರೆಯಲಾಗುತ್ತಿತ್ತು. ಈ ಬಾರಿ ಜಿಲ್ಲಾಡಳಿತ ಸೂಚಿಸಿರುವ ಸ್ಥಳದಲ್ಲಿ ಮಾತ್ರ ಮಳಿಗೆ ತೆರೆಯಬೇಕಿದೆ. ನಗರದ ಜೆ.ಕೆ.ಮೈದಾನ, ದೊಡ್ಡಕೆರೆ ಮೈದಾನ, ಬಲ್ಲಾಳ್‍ವೃತ್ತ, ಮೊಗಾದಿ, ಜೆ.ಪಿ.ನಗರ, ಚಾಮುಂಡಿಪುರಂ, ಹಿಣಕಲ್‍ನ ಆಯ್ದ ಸ್ಥಳಗಳಲ್ಲಿ ಮಾತ್ರ ಪಟಾಕಿ ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇದೆಲ್ಲದರಿಂದ ಪಟಾಕಿ ಕೈ ಸುಡುವುದು ಗ್ಯಾರಂಟಿ.

ನಿಯಮಗಳನ್ನು ಪಾಲಿಸಿ :

ಮೈಸೂರು, ಅ.17- ದೀಪಾವಳಿಯಂದು ಸಾರ್ವಜನಿಕರು ಮತ್ತು ಪಟಾಕಿ ಮಾರಾಟಗಾರರು ಕೆಲವು ನಿಯಮಗಳನ್ನು ಪಾಲಿಸಬೇಕೆಂದು ಜಿಲ್ಲಾಧಿಕಾರಿ ರಂದೀಪ್ ಮತ್ತು ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣೇಶ್ವರರಾವ್ ಮನವಿ ಮಾಡಿದರು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮರಾಟ ಮತ್ತು ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಶಾಲಾ ಮೈದಾನ, ವಸತಿ ಪ್ರದೇಶ, ಕೈಗಾರಿಕಾ ಪ್ರದೇಶಗಳಲ್ಲಿ ಪಟಾಕಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರ, ಪಟ್ಟಣ ಪ್ರದೇಶಗಳಲ್ಲಿ, ಸಾರ್ವಜನಿಕ ಸ್ಥಳ ಹಾಗೂ ಮೈದಾನವನ್ನು ಆಯ್ಕೆ ಮಾಡಿಕೊಂಡು ಪಟಾಕಿ ಸಿಡಿಸಬೇಕೆಂದು ಮನವಿ ಮಾಡಿದರು. ಪಟಾಕಿ ಸಿಡಿಸುವ ಜಾಗದಿಂದ 4 ಮೀಟರ್ ದೂರದಲ್ಲಿ ಪಟಾಕಿ ತಯಾರಿಸುವ ಹಾಗೂ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.
ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣೇಶ್ವರರಾವ್ ಹೇಳಿಕೆ ನೀಡಿ, ದೀಪಾವಳಿಯಂದು ಸುರಕ್ಷತೆ ಹಿನ್ನೆಲೆಯಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಮುನ್ನೆಚ್ಚರಿಕೆ ಕ್ರಮಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ.

ಪರವಾನಗಿ ಪಡೆದ ಮಾರಾಟಗಾರರಿಂದ ಪಟಾಕಿ ಖರೀದಿಸಬೇಕು. ಹಚ್ಚುವ ಮುನ್ನ ಸಮೀಪ ನೀರು ಇಟ್ಟುಕೊಳ್ಳಬೇಕು. ಆಕಾಶದಲ್ಲಿ ಸಿಡಿಯುವ ಪಟಾಕಿ ಹಾಗೂ ರಾಕೇಟ್‍ಗಳನ್ನು ವಿಸ್ತಾರವಾದ ಸ್ಥಳದಲ್ಲಿ ಸಿಡಿಸುವುದು. ಮಕ್ಕಳು ಪಟಾಕಿ ಸಿಡಿಸುವಾಗ ವಯಸ್ಕರು ಎಚ್ಚರ ವಹಿಸುವುದು, ಮನೆಯೊಳಗೆ ಹಚ್ಚಬಾರದು. ಹೆಚ್ಚು ವಾಹನಗಳು ಸಂಚರಿಸುವ ರಸ್ತೆಗಳಲ್ಲಿ ಪಟಾಕಿ ಸಿಡಿಸಬಾರದು ಎಂದು ತಿಳಿಸಿದ್ದಾರೆ.

 

Facebook Comments

Sri Raghav

Admin