ಅಂತ್ಯಕ್ರಿಯೆಗೆ ಹೊರಟ ನಾಲ್ವರು ಮಸಣ ಸೇರಿದರು

ಈ ಸುದ್ದಿಯನ್ನು ಶೇರ್ ಮಾಡಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಳ್ಳಾರಿ,ಅ.21-ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಗಾದಿಗನೂರು ಬಳಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಇತರ ಐವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಹೊಸಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತರನ್ನು ಕಾರು ಚಾಲಕ ಶ್ರೀನಿವಾಸ್, ವೆಂಕಟಮ್ಮ , ನಳಿನಿ ಮತ್ತೊಬ್ಬ ಮಹಿಳೆ (ಹೆಸರು ತಿಳಿದುಬಂದಿಲ್ಲ) ಎಂದು ಗುರುತಿಸಲಾಗಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ಮೂಲದ 9 ಮಂದಿ ಹೊಸಪೇಟೆ ತಾಲ್ಲೂಕಿನ ಪಿ.ಕೆ.ಹಳ್ಳಿಯಲ್ಲಿ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ವ್ಯಾಗ್ನರ್ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಗಾದಿಗನೂರು ಬಳಿ ಎದುರಿನಿಂದ ಬಂದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ.  ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು , ಲಾರಿ ಕೂಡ ಜಖಂಗೊಂಡಿದೆ. ಗಾದಿಗನೂರು ಠಾಣೆ ಪೋಲಿಸರು ಸ್ಥಳಕ್ಕೆ ದಾವಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಸುದ್ದಿ ತಿಳಿದು ಅಪಘಾತದ ಸ್ಥಳಕ್ಕೆ ಬಂದ ಮೃತರ ಸಂಬಂಧಿಕರ ಗೋಳು ಮುಗಿಲುಮುಟ್ಟಿದೆ.

Facebook Comments