ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐವರು ಅಭ್ಯರ್ಥಿಗಳ ಪಟ್ಟಿ ಕಳಿಸಿ : ಬಿಜೆಪಿ ಹೈಕಮಾಂಡ್

ಈ ಸುದ್ದಿಯನ್ನು ಶೇರ್ ಮಾಡಿ

Amith-Shah--01

ಬೆಂಗಳೂರು,ಅ.23-ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸುತ್ತಿರುವ ಬಿಜೆಪಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐವರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡುವಂತೆ ವರಿಷ್ಠರು ತಿಳಿಸಿದ್ದಾರೆ. ನವೆಂಬರ್ 2ರಿಂದ ಆರಂಭವಾಗಲಿರುವ ಪರಿವರ್ತನ ರ್ಯಾಲಿಗೆ ಮುನ್ನ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಂದ ಐವರು ಅಭ್ಯರ್ಥಿಗಳ ಹೆಸರನ್ನು ಕಳುಹಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ರಾಜ್ಯ ಘಟಕದ ನಾಯಕರು ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಿಂದ ಐದೈದು ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ದಗೊಳಿಸುವತ್ತ ಮಗ್ನರಾಗಿದ್ದಾರೆ.

ಹಾಲಿ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು ಸೇರಿದಂತೆ ಮತ್ತಿತರ ಆಕಾಂಕ್ಷಿಗಳ ಪಟ್ಟಿ ಸಿದ್ದಗೊಳುತ್ತಿದೆ. ಈಗಾಗಲೇ ಪ್ರತಿ ಜಿಲ್ಲಾ ಘಟಕದಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  ಜಾತಿ, ಪ್ರದೇಶವಾರು, ಕ್ಷೇತ್ರದಲ್ಲಿ ಮತದಾರರ ಜೊತೆ ಹೊಂದಿರುವ ಸಂಪರ್ಕ, ವರ್ಚಸ್ಸು , ಪಕ್ಷಕ್ಕೆ ಸಲ್ಲಿಸಿರುವ ಸೇವೆ, ಪಕ್ಷ ಸಂಘಟನೆ, ವಿಸ್ತರಕ್ ಕಾರ್ಯಕ್ರಮ, ರಾಜ್ಯ ಸರ್ಕಾರದ ವಿರುದ್ದ ಹೋರಾಟ, ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿರುವುದು ಸೇರಿದಂತೆ ಹತ್ತು ಹಲವು ಮಾನದಂಡಗಳ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಕೇಂದ್ರದಿಂದ ಸೂಚನೆ ಬಂದಿದೆ.
ಹೀಗಾಗಿ ಸಾಕಷ್ಟು ಅಳೆದುತೂಗಿ ಯಾವುದೇ ಪ್ರಭಾವಕ್ಕೂ ಮಣಿಯದೆ ಪ್ರತಿ ವಿಧಾನಸಭಾ ಕ್ಷೇತ್ರದಿಂದ ತಿಂಗಳ ಅಂತ್ಯಕ್ಕೆ ಅಭ್ಯರ್ಥಿಗಳ ಪಟ್ಟಿ ಕೇಂದ್ರ ಚುನಾವಣೆಗೆ ತಲುಪಲಿದೆ.

ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಮುನ್ನ ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಚುನಾವಣಾ ಉಸ್ತವಾರಿ ಪ್ರಕಾಶ್ ಜಾವ್ಡೇಕರ್, ಸಹ ಉಸ್ತುವಾರಿ ಪಿಯೂಶ್ ಗೋಯಲ್, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕೋರ್ ಕಮಿಟಿ ಸದಸ್ಯರಾದ ಅನಂತಕುಮಾರ್, ಸದಾನಂದಗೌಡ, ಗೋವಿಂದ ಕಾರಜೋಳ, ಆರ್.ಅಶೋಕ್, ಜಗದೀಶ್ ಶೆಟ್ಟರ್, ಈಶ್ವರಪ್ಪ , ನಳೀನ್‍ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗು ಆರ್‍ಎಸ್‍ಎಸ್ ನಾಯಕರ ಜೊತೆ ಮಾತುಕತೆ ನಡೆಸಬೇಕೆಂದು ಸೂಚಿಸಲಾಗಿದೆ.

ಈ ಹಿಂದೆ ಚುನಾವಣೆಗೂ ಮುನ್ನವೇ ಅಂದರೆ ಉತ್ತರಪ್ರದೇಶ, ಉತ್ತರಖಂಡ್ ಸೇರಿದಂತೆ ಮತ್ತಿತರ ರಾಜ್ಯಗಳಲ್ಲಿ 6 ತಿಂಗಳ ಮುಂಚೆಯೇ ಅಭ್ಯರ್ಥಿಗಳ ಪಟ್ಟಿಯನ್ನು ಕಳುಹಿಸಿಕೊಡುವಂತೆ ರಾಜ್ಯ ಘಟಕಕ್ಕೆ ಸೂಚಿಸಿತ್ತು. ಅಂತಿಮವಾಗಿ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಯಾವುದೇ ಗೊಂದಲವಿಲ್ಲದೆ ಪಟ್ಟಿ ಬಿಡುಗಡೆ ಮಾಡಲಾಗಿತ್ತು.  ಇದರ ಪರಿಣಾಮ ಉತ್ತರ ಪ್ರದೇಶ ಹಾಗೂ ಉತ್ತರಖಂಡ್‍ನಲ್ಲಿ ಬಿಜೆಪಿ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಮಾಡಿ ಅಭೂತಪೂರ್ವ ಗೆಲುವು ಸಾಧಿಸಿತ್ತು. ಈಗ ಇದೇ ಮಾದರಿಯನ್ನು ಅನುಸರಿಸುತ್ತಿರುವ ಬಿಜೆಪಿ ಅಭ್ಯರ್ಥಿ ಆಯ್ಕೆಯತ್ತ ಗಮನ ನೀಡಿದೆ.

ನವೆಂಬರ್ 2ರಂದು ಪರಿವರ್ತನ ರಥಯಾತ್ರೆಗೆ ಚಾಲನೆ ನೀಡಲು ಆಗಮಿಸಲಿರುವ ಅಮಿತ್ ಷಾ, ರಾಜ್ಯ ಘಟಕದ ನಾಯಕರ ಜೊತೆ ಒಂದು ಸುತ್ತಿನ ಔಪಚಾರಿಕ ಮಾತುಕತೆ ನಡೆಸಲಿದ್ದಾರೆ. ಪಟ್ಟಿ ಕೇಂದ್ರ ಚುನಾವಣಾ ಸಮಿತಿಗೆ ತಲುಪುತ್ತಿದ್ದಂತೆ ಎಲ್ಲರ ಮಾಹಿತಿ ಕಲೆ ಹಾಕಿ ಸರ್ವ ಸಮ್ಮತದ ಅಭ್ಯರ್ಥಿಯನ್ನೇ ಕಣಕಿಳಿಸಲಿದ್ದಾರೆ.

Facebook Comments

Sri Raghav

Admin