ಭಾರತ-ಕಿವೀಸ್ ನಡುವಿನ ಪುಣೆ ಪಂದ್ಯ ಫಿಕ್ಸ್ , ಪಿಚ್ ಕ್ಯುರೇಟರ್ ಸಸ್ಪೆಂಡ್, ತನಿಖೆಗೆ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

Match--02

ನವದೆಹಲಿ/ಪುಣೆ, ಅ.25-ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಪುಣೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ 2ನೇ ಏಕದಿನ ಪಂದ್ಯದ ಮೇಲೆ ಮ್ಯಾಚ್ ಫಿಕ್ಸಿಂಗ್ (ಮೋಸದಾಟ) ಕರಾಳ ಛಾಯೆ ಆವರಿಸಿದೆ. ಈ ನಡುವೆ, ಮೈದಾನದ ಬಗ್ಗೆ ರಹಸ್ಯ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಪಿಚ್ ಕ್ಯುರೇಟರ್ ಪಾಂಡುರಂಗ ಸಲ್ಗಾಂವ್‍ಕರ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಸ್ಪೆಂಡ್‍ಗೊಳಿಸಿದೆ. ಅಲ್ಲದೇ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮತ್ತೆ ಮ್ಯಾಚ್ ಫಿಕ್ಸಿಂಗ್ ಭೂತ ಕ್ರಿಕೆಟ್ ರಂಗವನ್ನು ಕಾಡಲಾರಂಭಿಸಿದೆ.  ಈ ತಕ್ಷಣದಿಂದ ಜಾರಿಗೆ ಬರುವಂತೆ ಪಾಂಡುರಂಗ ಸಲ್ಗಾಂವ್‍ಕರ್ ಅವರನ್ನು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‍ನ(ಎಂಸಿಎ) ಕ್ಯುರೇಟರ್ ಸ್ಥಾನದಿಂದ ಅಮಾನತುಗೊಳಿಸಲಾಗಿದೆ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದ್ದಾರೆ.   ಅವರನ್ನು ಎಂಸಿಎನ ಎಲ್ಲ ಹುದ್ದೆಗಳಿಂದಲೂ ಸಸ್ಪೆಂಡ್ ಮಾಡಲಾಗಿದೆ. ಎಂಸಿಎನಿಂದ ತನಿಖೆ ನಡೆಸಲು ತನಿಖಾ ಆಯೋಗವನ್ನು ರಚಿಸಲಾಗುತ್ತಿದೆ. ಯಾವುದೇ ಭ್ರಷ್ಟಾಚಾರ ಅಥವಾ ಲಂಚರುಷುವತ್ತುಗಳನ್ನು ಬಿಸಿಸಿಐ ಸಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪುಣೆ ಪಿಚ್ ಕ್ಯೂರೇಟರ್ ಪಾಂಡುರಂಗ ಅವರು ನ್ಯೂಜಿಲೆಂಡ್ ತಂಡಕ್ಕೆ ಕ್ರೀಡಾಂಗಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಿರುವ ದೃಶ್ಯ ಖಾಸಗಿ ಟಿವಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗವಾದ ನಂತರ 2ನೇ ಏಕದಿನ ಪಂದ್ಯದ ಬಗ್ಗೆ ಹಲವು ಸಂಶಯಗಳು ಉದ್ಭವಿಸಿದ್ದು, ವಿವಾದದ ಬಿರುಗಾಳಿ ಎದ್ದಿದೆ.  ಮೊದಲು ಬ್ಯಾಟಿಂಗ್ ಮಾಡಿದರೆ ಅಥವಾ ಬೌಲಿಂಗ್ ಆಯ್ದುಕೊಂಡರೆ ತಂಡಕ್ಕೆ ಯಾವಯಾವ ಲಾಭಗಳು ಇವೆ ಎಂಬ ಬಗ್ಗೆ ನ್ಯೂಜಿಲೆಂಡ್ ತಂಡಕ್ಕೆ ತಿಳಿಸಿರುವ ಪಾಂಡುರಂಗ, ಕಿವೀಸ್‍ಗೆ ಅನುಕೂಲವಾಗುವಂತೆ ಪಿಚ್‍ನನ್ನು ವಿರೂಪಗೊಳಿಸುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾದ ದೃಶ್ಯ ಇಂಡಿಯಾ ಟುಡೆ ಟಿವಿಯ ಕುಟುಕು ಕಾರ್ಯಾಚರಣೆಯಲ್ಲಿದೆ.

ಈ ರಹಸ್ಯ ಮಾಹಿತಿ ಸೋರಿಕೆ ಮತ್ತು ಪಿಚ್ ವಿರೂಪಗೊಳಿಸುವ ಉದ್ದೇಶಕ್ಕಾಗಿ ಕ್ಯುರೇಟರ್ ಎಷ್ಟು ಹಣ ಸ್ವೀಕರಿಸಿದ್ದಾರೆ ಎಂಬುದು ತಿಳಿದುಬಂದಿಲ್ಲ.
ಭಾರತ-ನ್ಯೂಜಿಲೆಂಡ್ ನಡುವಣ ಮೂರು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕಿವೀಸ್ ಜಯ ಸಾಧಿಸಿತ್ತು. ಎರಡನೇ ಪಂದ್ಯವನ್ನೂ ಜಯಿಸಿ ಸರಣಿಯನ್ನು ಕೈವಶ ಮಾಡಿಕೊಳ್ಳುವ ತವಕದಲ್ಲಿತ್ತು. ಉಭಯ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

Facebook Comments

Sri Raghav

Admin