ಚುನಾವಣಾ ಸಮೀಪಿಸುತ್ತಿದ್ದಂತೆ ಜೋರಾಗಿದೆ ಪಕ್ಷಾಂತರ ಪರ್ವ

ಈ ಸುದ್ದಿಯನ್ನು ಶೇರ್ ಮಾಡಿ

Politics-Parties

ಬೆಂಗಳೂರು, ಅ.26-ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ವಿವಿಧ ಪಕ್ಷಗಳ ನಾಯಕ ಪಕ್ಷಾಂತರವೂ ಆರಂಭವಾಗಿದೆ. ಶಾಸಕ ಸಿ.ಪಿ.ಯೋಗೇಶ್ವರ ಮತ್ತು ಪಿ.ರಾಜೀವ್ ಬಿಜೆಪಿ ಸೇರಲಿದ್ದಾರೆ. ಕರ್ನಾಟಕ ಬಿಜೆಪಿ ನವೆಂಬರ್ 2ರಂದು ಪರಿವರ್ತನಾ ಯಾತ್ರೆಗೆ ಚಾಲನೆ ನೀಡಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೃಹತ್ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಅಂದು ಸಿ.ಪಿ.ಯೋಗೇಶ್ವರ ಮತ್ತು ಪಿ.ರಾಜೀವ್ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ.

ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ ಅವರು ಈಗಾಗಲೇ ಕಾಂಗ್ರೆಸ್ ತೊರೆದಿದ್ದಾರೆ. ಬಿಜೆಪಿ ಸೇರಿ ಅವರು ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣ ಅಥವ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಬಿ.ಶ್ರೀರಾಮುಲು ಅವರು ಸ್ಥಾಪನೆ ಮಾಡಿದ್ದ ಬಿಎಸ್‍ಆರ್ ಕಾಂಗ್ರೆಸ್ ಪಕ್ಷದಿಂದ ಕುಡಚಿ ಕ್ಷೇತ್ರದಲ್ಲಿ ಗೆದ್ದು ಬಂದಿದ್ದ ಪಿ.ರಾಜೀವ್ ಬಿಜೆಪಿ ಸೇರಲಿದ್ದಾರೆ. ಶ್ರೀರಾಮುಲು ಅವರು ಬಿಜೆಪಿಗೆ ಮರಳಿ ಬಳ್ಳಾರಿ ಸಂಸದರಾಗಿ ಆಯ್ಕೆಯಾದರೂ ರಾಜೀವ್ ಬಿಎಸ್‍ಆರ್ ಕಾಂಗ್ರೆಸ್ ಪಕ್ಷದಲ್ಲಿದ್ದರು. ಈಗ ಚುನಾವಣೆ ಹತ್ತಿರವಾಗುತ್ತಿದ್ದು ಬಿಜೆಪಿ ಸೇರುತ್ತಿದ್ದಾರೆ. ವಿವಿಧ ಪಕ್ಷಗಳ 20ಕ್ಕೂ ಹೆಚ್ಚು ನಾಯಕರು ಬಿಜೆಪಿ ಸೇರಲಿದ್ದಾರೆ ಎಂದು ಮಾಜಿ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಆದರೆ, ನವೆಂಬರ್ 2ರಂದು ಯಾವ ನಾಯಕರು ಸೇರಲಿದ್ದಾರೆ ಎಂದು ಅವರು ಗುಟ್ಟು ಬಿಟ್ಟುಕೊಟ್ಟಿಲ್ಲ.

ಮತ್ತೆ ಪಕ್ಷಾಂತರ :

ಬಿಜೆಪಿಗೆ ಮರಳಲಿರುವ ಸಿಪಿ ಯೋಗೇಶ್ವರ್ 2008ರಲ್ಲಿ ಕಾಂಗ್ರೆಸ್ನಿಂದ ಗೆದ್ದಿದ್ದ ಸಿ.ಪಿ.ಯೋಗೇಶ್ವರ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಸಚಿವರಾಗಿದ್ದರು. 2013ರ ಚುನಾವಣೆಯಲ್ಲಿ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿ ಗೆದ್ದು ಬಂದಿದ್ದರು. ಮತ್ತೆ ಸಮಾಜವಾದಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು. ಸದ್ಯ, ಕಾಂಗ್ರೆಸ್ ತೊರೆದಿದ್ದು, ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ.

ಪಿ.ರಾಜೀವ್ ಬಿಜೆಪಿಗೆ:

ಕುಡಚಿ ಕ್ಷೇತ್ರದ ಬಿಎಸ್‍ಆರ್ ಕಾಂಗ್ರೆಸ್ ಶಾಸಕ ಪಿ.ರಾಜೀವ್ ಬಿಜೆಪಿ ಸೇರಲಿದ್ದಾರೆ. ಬಿ.ಶ್ರೀರಾಮುಲು ಅವರು ಬಿಎಸ್‍ಆರ್ ಕಾಂಗ್ರೆಸ್ ಪಕ್ಷ ಸ್ಥಾಪಿಸಿದಾಗ ಅಭ್ಯರ್ಥಿಯಾಗಿ ನಿಂತು ಜಯಗಳಿಸಿದ್ದರು. ಆದರೆ, ಶ್ರೀರಾಮುಲು ಅವರು ಬಿಜೆಪಿಗೆ ಮರಳಿದರೂ ರಾಜೀವ್ ಬಿಎಸ್‍ಆರ್ ಕಾಂಗ್ರೆಸ್ ಪಕ್ಷದಿಂದಲೇ ಗುರುತಿಸಿಕೊಂಡಿದ್ದರು. ಸದ್ಯ, ಅವರು ಬಿಜೆಪಿ ಸೇರುತ್ತಿದ್ದಾರೆ. ಜೆಡಿಎಸ್ ನಾಯಕ, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಪುಟ್ಟಣ್ಣ ಅವರು ಬಿಜೆಪಿಗೆ ಬಂದರೆ ಯಶವಂತಪುರ ಕ್ಷೇತ್ರದಿಂದ ಮುಂದಿನ ಚುನಾವಣೆ ಟಿಕೆಟ್ ನೀಡಲಾಗುತ್ತದೆ ಎಂಬುದು ಸುದ್ದಿ. ಆದರೆ, ನವೆಂಬರ್ 2ರಂದು ಅವರು ಪಕ್ಷ ಸೇರಲಿದ್ದಾರೆಯೇ? ಎಂಬುದು ಖಚಿತವಾಗಿಲ್ಲ.

ಅಮಿತ್ ಶಾ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ:

ನವೆಂಬರ್ 2ರಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಈ ಯಾತ್ರೆಯ ಉದ್ಘಾಟನಾ ಸಮಾವೇಶದಲ್ಲಿ ಯೋಗೇಶ್ವರ, ರಾಜೀವ್ ಬಿಜೆಪಿ ಸೇರಲಿದ್ದಾರೆ.

Facebook Comments

Sri Raghav

Admin