ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿವೆ ಪ್ರಮುಖ 4 ವಿಧೇಯಕಗಳು

ಈ ಸುದ್ದಿಯನ್ನು ಶೇರ್ ಮಾಡಿ

TB-Jayachandra

ಬೆಂಗಳೂರು, ಅ.26-ನವೆಂಬರ್ ತಿಂಗಳಲ್ಲಿ ಬೆಳಗಾವಿ ಯಲ್ಲಿ ನಡೆಯಲಿರುವ ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ ಮೌಢ್ಯ ನಿಷೇಧ, ಸರ್ಕಾರಿ ನೌಕರರ ಮುಂಬಡ್ತಿ, ಮೀಸಲಾತಿ ವಿಧೇಯಕ ಸೇರಿದಂತೆ ಪ್ರಮುಖ ನಾಲ್ಕು ವಿಧೇಯಕಗಳು ಮಂಡನೆಯಾಗಲಿವೆ ಎಂದು ಕಾನೂನು ಮತ್ತು ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಸಿ-ಎಸ್ಟಿ ವರ್ಗದವರಿಗೆ ನೀಡಲಾಗುವ ಮುಂಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ವಿಧೇಯಕ ಮಂಡಿಸಲಾಗುವುದು. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸಮಿತಿಯೊಂದನ್ನು ರಚಿಸಿ ಸರ್ಕಾರ ಈಗಾಗಲೇ ವರದಿ ಪಡೆದಿದೆ ಎಂದರು.

ಪದೇ ಪದೇ ಚರ್ಚೆಗೊಳಗಾಗುತ್ತಿರುವ ಮೌಢ್ಯ ನಿಷೇಧ ಕುರಿತು ವಿಧೇಯಕವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು. ಕಂಬಳ ಆಚರಣೆಗೆ ಸಂಬಂಧಿಸಿದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಒಪ್ಪಿಗೆ ದೊರೆತಿದೆ. ಆದರೂ ನವೆಂಬರ್-ಮಾರ್ಚ್ ನಡುವೆ ಕಂಬಳ ಆಚರಣೆಗಳು ನಡೆಯುವ ಸಾಧ್ಯತೆ ಇದ್ದು, ಮತ್ತೆ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗುವುದು ಎಂದು ತಿಳಿಸಿದರು.

ವಾಸಿಸುವವನೇ ಮನೆದೊಡೆಯ ಎಂಬ ವಿಧೇಯಕಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ದೊರೆತಿದ್ದು, ಇದನ್ನು ಪುನಃ ಅಧಿವೇಶನದಲ್ಲಿ ಮಂಡಿಸಲಾಗುವುದು. ಈಗಾಗಲೇ ಬೆಳಗಾವಿ ಅಧಿವೇಶನವನ್ನು ಹತ್ತು ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿದೆ. ಇದರ ಅವಧಿಯನ್ನು ವಿಸ್ತರಿಸುವ ಸಾಧ್ಯತೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.ಸರ್ಕಾರ ವಿವಿಧ ಇಲಾಖೆಗಳ ಬಾಕಿ ಇರುವ ಕೇಸುಗಳನ್ನು ನ್ಯಾಯಾಲಯದಲ್ಲಿ ತ್ವರಿತವಾಗಿ ಇತ್ಯರ್ಥಗೊಳಿಸುವ ಉದ್ದೇಶದಿಂದ ನಾಲ್ವರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

Facebook Comments

Sri Raghav

Admin