ಸತತ 2-3 ಗಂಟೆಗಳ ನಂತರ ಆಪರೇಷನ್ ಚಿರತೆ ಸಕ್ಸಸ್, ನಿಟ್ಟುಸಿರು ಬಿಟ್ಟ ಜನ

ಈ ಸುದ್ದಿಯನ್ನು ಶೇರ್ ಮಾಡಿ

Cheeta--01

ಮೈಸೂರು, ಅ.26- ವಿಶ್ವವಿಖ್ಯಾತ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಬೆಳ್ಳಂಬೆಳಗ್ಗೆ ಎಲ್ಲಿಂದಲೋ ಚಿರತೆಯೊಂದು ನುಗ್ಗಿದ್ದು, ಅರಣ್ಯ ಸಿಬ್ಬಂದಿ ಸತತ 2-3 ಗಂಟೆಗಳ ಕಾರ್ಯಾಚರಣೆ ನಡೆಸಿ ಕಡೆಗೂ ಚಿರತೆಯನ್ನು ಹಿಡಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ತೀವ್ರ ಆತಂಕಕ್ಕೀಡಾಗಿದ್ದ ಜನತೆ ಮತ್ತು ಪ್ರವಾಸಿಗರು ಕಡೆಗೆ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಬೆಳಗ್ಗೆ ಮೃಗಾಲಯದ ಸಿಬ್ಬಂದಿಯೊಬ್ಬರು ಗಸ್ತು ತಿರುಗುತ್ತಿದ್ದಾಗ ಚಿರತೆಯೊಂದು ಆಲಯದ ಮರವೇರಿ ಮಲಗಿರುವುದು ಕಂಡು ಬಂದಿದೆ. ತಕ್ಷಣ ಬೆಚ್ಚಿಬಿದ್ದ ಅವರು ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ್ದಾರೆ. ಸಿಬ್ಬಂದಿ ಕೇಜ್‍ನಲ್ಲಿದ್ದ ಚಿರತೆಗಳನ್ನು ಲೆಕ್ಕ ಮಾಡಿದಾಗ ಅವೆಲ್ಲವೂ ಅಲ್ಲಲ್ಲೇ ಇದ್ದದ್ದು ಗೊತ್ತಾಗಿದ್ದು, ಮರವೇರಿದ ಚಿರತೆ ಚಾಮುಂಡಿ ಬೆಟ್ಟ ಅಥವಾ ಸಮೀಪದ ಅರಣ್ಯ ಪ್ರದೇಶದಿಂದ ಬಂದಿರಬಹುದೆಂದು ಶಂಕಿಸಲಾಗಿದೆ.

ಬೆಳಗ್ಗೆಯೇ ಪ್ರವಾಸಿಗರು ಝೂ ವೀಕ್ಷಿಸಲು ಬಂದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರನ್ನೂ ವಾಪಸ್ ಕಳುಹಿಸಿ ಮೃಗಾಲಯಕ್ಕೆ ಬೀಗ ಹಾಕಿ ಕೆಲ ಕಾಲ ಮೃಗಾಲಯಕ್ಕೆ ಪ್ರವೇಶ ನಿಷೇಧಿಸಿದ್ದರು.
ಮೃಗಾಲಯದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಮೃಗಾಲಯ ಸಮೀಪದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದರು. ಸಾರ್ವಜನಿಕರು ಈ ಭಾಗದಲ್ಲಿ ಸಂಚರಿಸದಂತೆ ನೋಡಿಕೊಳ್ಳಲಾಗಿತ್ತು. ಬೇರೆ ಊರುಗಳಿಂದ ಝೂ ವೀಕ್ಷಿಸಲು ಬಂದಿದ್ದ ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸಲಾಯಿತು. ಮೃಗಾಲಯಕ್ಕೆ ಅರವಳಿಕಾ ತಜ್ಞರು ಹಾಗೂ ಅರಣ್ಯಾಧಿಕಾರಿಗಳು ಆಗಮಿಸಿ ಆಪರೇಷನ್ ಚೀತಾ ಪ್ರಾರಂಭಿಸಿದರು.

ಸತತ 2-3 ಗಂಟೆಗಳ ಕಾಲ ಶ್ರಮವಹಿಸಿ ಅರವಳಿಗೆ ತಜ್ಞರು ಚಿರತೆಗೆ ಚುಚ್ಚಮದ್ದು ನೀಡುವಲ್ಲಿ ಯಶಸ್ವಿಯಾದರು. ಚಿರತೆ ನಿತ್ರಾಣಗೊಳ್ಳುತ್ತಿದ್ದಂತೆ ಬೋನಿನಲ್ಲಿ ಕೂಡಿಡಲಾಗಿದೆ. ಚಿರತೆ ಆರೋಗ್ಯವಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ರವಿಕುಮಾರ್ ತಿಳಿಸಿದ್ದಾರೆ.
ನಮ್ಮಲ್ಲಿರುವ ಚಿರತೆಗಳಿಗೆ ಚಿಪ್ ಅಳವಡಿಸಿರುವುದರಿಂದ ಈಗ ಬಂಧಿತವಾಗಿರುವ ಚಿರತೆ ಚಾಮುಂಡಿಬೆಟ್ಟ ಅಥವಾ ಸಮೀಪದ ಅರಣ್ಯ ಭಾಗದಿಂದ ಬಂದಿರಬಹುದು. ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಿ ನಮ್ಮ ಮೃಗಾಲಯದಲ್ಲೇ ಇಟ್ಟುಕೊಳ್ಳುವುದೋ ಅಥವಾ ಅರಣ್ಯಕ್ಕೆ ಬಿಡುವುದೋ ಎಂಬುದನ್ನು ನಿರ್ಧರಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments

Sri Raghav

Admin