ಮತಯಂತ್ರಗಳಿಗೆ ವಿವಿ ಪ್ಯಾಟ್ ಅಳವಡಿಸುವಂತೆ ಆಯೋಗಕ್ಕೆ ಕಾಂಗ್ರೆಸ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

VV-Pat--011

ಬೆಂಗಳೂರು, ಅ.29-ಮತಯಂತ್ರಗಳು ದುರ್ಬಳಕೆಯಾಗುವ ಸಾಧ್ಯತೆ ಇರುವ ಆತಂಕದ ಹಿನ್ನೆಲೆಯಲ್ಲಿ ಎಲ್ಲ ಮತಯಂತ್ರಗಳಿಗೆ ವಿವಿ ಪ್ಯಾಟ್ ಅಳವಡಿಸಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ಕೆಪಿಸಿಸಿ ಇಂದು ನಡೆದ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ಡಿಸೆಂಬರ್‍ನಲ್ಲಿ ನಡೆಯುವ ಗುಜರಾತ್ -ಹಿಮಾಚಲ ಪ್ರದೇಶ ಚುನಾವಣೆ ಸೇರಿದಂತೆ ಎಲ್ಲಾ ಮುಂದಿನ ವಿಧಾನಸಭೆ ಚುನಾವಣೆಗಳಲ್ಲಿ ಪ್ರತಿಯೊಂದು ಮತಯಂತ್ರದಲ್ಲೂ ವಿವಿ ಪ್ಯಾಟ್ ಅಳವಡಿಸುವ ಕ್ರಮವನ್ನು ಚುನಾವಣಾ ಆಯೋಗ ಕೈಗೊಳ್ಳಬೇಕು. ಈ ಸಂಬಂಧ ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಚುನಾವಣಾ ಆಯೋಗಕ್ಕೆ ಮನವಿ ಮೂಲಕ ಒತ್ತಡ ಸಲ್ಲಿಸಬೇಕೆಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ಸೋಮವಾರ ಆಯೋಗಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.  ಬಿಜೆಪಿ ಇತ್ತೀಚೆಗೆ ನಡೆಯುತ್ತಿರುವ ಎಲ್ಲಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮತಯಂತ್ರಗಳ ದುರ್ಬಳಕೆ ಕಾರಣವಾಗಿದೆ. ಮತಯಂತ್ರವನ್ನು ಟ್ಯಾಂಪರ್ ಮಾಡಿ ಮತಗಳು ಬಿಜೆಪಿಗೇ ಹೋಗುವಂತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಉತ್ತರಪ್ರದೇಶ ಸೇರಿದಂತೆ ಬಹುತೇಕ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮುಂದೆ ಗುಜರಾತ್ ಚುನಾವಣೆಯಲ್ಲೂ ಇದೇ ರೀತಿ ತಂತ್ರಗಾರಿಕೆಯನ್ನು ಬಳಸುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಕಾಂಗ್ರೆಸ್ ವಲಯದಲ್ಲಿ ನಡೆದಿವೆ.

ಹೀಗಾಗಿ ಮತಯಂತ್ರ ದುರುಪಯೋಗ ತಡೆಗಟ್ಟಲು, ಅತಿ ಹೆಚ್ಚಿನ ಜಾಗೃತಿ ವಹಿಸಲು ಪ್ರತಿಯೊಂದು ರಾಜ್ಯದ ಪ್ರದೇಶ ಕಾಂಗ್ರೆಸ್ ಸಮಿತಿಯಿಂದಲೂ ಮತಯಂತ್ರಗಳ ಮಾಹಿತಿ ಪಡೆಯುವಂತೆ ನಿರ್ಣಯ ಕೈಗೊಂಡು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ. ಈ ಮೂಲಕ ಮುಂದಿನ ಚುನಾವಣೆಯಲ್ಲಿ ಯಾವುದೇ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸೂಚಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಜನರ ಒಲವಿದೆ. ಯಾವುದೇ ಕ್ಷಣದಲ್ಲಿ ಚುನಾವಣೆ ನಡೆದರೂ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಆದರೆ ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ಮತಯಂತ್ರಗಳನ್ನು ತಿರುಚುವ ಯತ್ನ ನಡೆಸಲಿದೆ. ಅದಕ್ಕಾಗಿ ಪ್ರತಿ ಮತಯಂತ್ರಕ್ಕೂ ವಿವಿಪ್ಯಾಟ್ (ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್) ಅಳವಡಿಸುವಂತೆ ಮನವಿ ಮಾಡಲು ನಿರ್ಧರಿಸಲಾಗಿದೆ.

Facebook Comments

Sri Raghav

Admin