ಬೆಳ್ಳಂಬೆಳಿಗ್ಗೆ ಬೆಂಗಳೂರಲ್ಲಿ ಸಿನಿಮಾ ಸ್ಟೈಲಲ್ಲಿ ನಡೀತು ರಾಬರಿ…!

ಈ ಸುದ್ದಿಯನ್ನು ಶೇರ್ ಮಾಡಿ

ATM-Robbery--01

ಬೆಂಗಳೂರು, ಅ.30- ಬೈಕ್‍ನಲ್ಲಿ ಬಂದ ಮೂವರು ದರೋಡೆಕೋರರು ಎಟಿಎಂಗೆ ಹಣ ತುಂಬಲು ಬಂದಿದ್ದ ಏಜೆನ್ಸಿ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಸಿನಿಮೀಯ ರೀತಿಯಲ್ಲಿ 40 ಲಕ್ಷ ಹಣ ದೋಚಿ ಪರಾರಿಯಾಗಿರುವ ಘಟನೆ ಬಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಾಲಹಳ್ಳಿ ಕ್ರಾಸ್‍ನ ಅಯ್ಯಪ್ಪಸ್ವಾಮಿ ಟೆಂಪಲ್ ಸಮೀಪವಿರುವ ಐಸಿಐಸಿಐ ಬ್ಯಾಂಕ್‍ನ ಎಟಿಎಂಗೆ ಹಣ ತುಂಬಲು ಇಂದು ಬೆಳಗ್ಗೆ 6 ಗಂಟೆಗೆ ಏಜೆನ್ಸಿಯ ಸಿಬ್ಬಂದಿ ಬಂದಿದ್ದರು.

40 ಲಕ್ಷ ಹಣವಿದ್ದ ಚೀಲವನ್ನು ವಾಹನದಿಂದ ಕೆಳಗಿಳಿಸಿ ಎಟಿಎಂಗೆ ದಾವಿಸುತ್ತಿದ್ದಾಗ ಬೈಕ್‍ನಲ್ಲಿ ಬಂದ ಮೂವರು ದರೋಡೆಕೋರರಲ್ಲಿ ಇಬ್ಬರು ಕೆಳಗಿಳಿದು ಹಣದ ಚೀಲ ಕಸಿಯಲು ಮುಂದಾದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಸಾಗರ್ ಮತ್ತು ಮೋಹನ್ ಎಂಬುವರು ದರೋಡೆಕೋರರಿಗೆ ಪ್ರತಿರೋಧ ತೋರಿದಾಗ ಒಬ್ಬ ದರೋಡೆಕೋರ ಜೇಬಿನಿಂದ ಚಾಕು ತೆಗೆದು ಸಾಗರ್ ಎಂಬುವರ ಮೇಲೆ ಹಲ್ಲೆ ನಡೆಸಿದ.

ಪ್ರಾಣಭಯದಿಂದ ಕೈನಲ್ಲಿದ್ದ ಹಣದ ಚೀಲವನ್ನು ಕೆಳಗಿಟ್ಟಾಗ ಇಬ್ಬರು ದರೋಡೆಕೋರರು ಚೀಲ ಲಪಟಾಯಿಸಿ ರನ್ನಿಂಗ್‍ನಲ್ಲೇ ಇದ್ದ ಬೈಕ್ ಏರಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದರೋಡೆಕೋರರ ಬಂಧನಕ್ಕೆ ನಗರದ ನಾಲ್ಕೂ ದಿಕ್ಕಿನಲ್ಲೂ ನಾಕಾಬಂದಿ ವಿಧಿಸಿದ್ದಾರೆ.

Facebook Comments

Sri Raghav

Admin