ಪ್ರಿಯಕರನ ಮನೆಯಲ್ಲಿ ಅಡಗಿದ್ದ ವಿದ್ಯಾರ್ಥಿನಿಯನ್ನು ಪೋಷಕರ ವಶಕ್ಕೊಪ್ಪಿಸಿದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಅ.31- ಕೊರಿಯರ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕೊರಿಯರ್ ಬಾಯ್ ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯನ್ನು ಪ್ರೀತಿಸಿ ತನ್ನ ಮನೆಗೆ ಕರೆದೊಯ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪೋಷಕರು ಜಯಲಕ್ಷ್ಮಿಪುರಂ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಡಿಕೇರಿಯ ಕುಶಾಲ್‍ನಗರದ ಡ್ಯಾನಿಷ್ ಎಂಬಾತ ಕೊರಿಯರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಮೂಲತಃ ತುಮಕೂರಿನ ಗುಬ್ಬಿ ನಿವಾಸಿ ಶ್ವೇತಾ (ಹೆಸರು ಬದಲಿಸಲಾಗಿದೆ) ಎಂಬಾಕೆ ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಹಾಸ್ಟೆಲ್‍ನಲ್ಲೇ ಉಳಿದುಕೊಳ್ಳುತ್ತಿದ್ದಳು. ಈ ಸಂದರ್ಭದಲ್ಲಿ ಕೊರಿಯರ್ ನೀಡಲು ಡ್ಯಾನಿಷ್ ಹಾಸ್ಟೆಲ್‍ಗೆ ತೆರಳಿದ್ದಾಗ ಈಕೆಯ ಪರಿಚಯವಾಗಿದೆ. ಈ ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಇವರಿಬ್ಬರು ಪ್ರೀತಿಸುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ವಿದ್ಯಾರ್ಥಿನಿ ಹಾಸ್ಟೆಲ್ ತೊರೆದು ಡ್ಯಾನಿಷ್ ರೂಮ್‍ಗೆ ಬಂದು ವಾಸಿಸುತ್ತಿದ್ದಳು.

ಹಾಸ್ಟೆಲ್ ಮೇಲ್ವಿಚಾರಕರು ನಾಲ್ಕು ದಿನಗಳಿಂದ ವಿದ್ಯಾರ್ಥಿನಿ ಹಾಸ್ಟೆಲ್‍ಗೆ ಬಾರದಿರುವುದರ ಬಗ್ಗೆ ಈಕೆಯ ಪೋಷಕರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ ಮನೆಗೆ ಬಂದಿಲ್ಲವೆಂದು ಹೇಳಿದ್ದಾರೆ. ಮೇಲ್ವಿಚಾರಕರ ಮಾತಿನಿಂದ ಗಾಬರಿಯಾದ ವಿದ್ಯಾರ್ಥಿನಿಯ ಪೋಷಕರು ಮೈಸೂರಿಗೆ ಬಂದು ಸ್ನೇಹಿತರನ್ನು ವಿಚಾರಿಸಿದಾಗಲೂ ಈಕೆಯ ಮಾಹಿತಿ ಸಿಗಲಿಲ್ಲ. ತದನಂತರ ಫೇಸ್‍ಬುಕ್‍ನಲ್ಲಿ ಚಾಟಿಂಗ್‍ನಲ್ಲಿರುವ ವಿಷಯ ತಿಳಿದು ವಿದ್ಯಾರ್ಥಿನಿಯ ವಿಳಾಸ ಪತ್ತೆ ಹಚ್ಚಲಾಗಿ ಈಕೆ ಪಡುವಾರಹಳ್ಳಿಯಲ್ಲಿರುವುದು ಪತ್ತೆಯಾಗಿದೆ. ತಕ್ಷಣ ಪೋಷಕರು ಜಯಲಕ್ಷ್ಮಿಪುರಂ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪಡುವಾರಹಳ್ಳಿಗೆ ತೆರಳಿ ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚಿ ಕೊನೆಗೂ ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಯುವಕನ ಪೋಷಕರನ್ನು ಕರೆಸಿ ಈ ಬಗ್ಗೆ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin