ಸಿಎಂ ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ : ಬಿಎಸ್‍ವೈ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--02

ತುಮಕೂರು, ಅ.31- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು ಪದೇ ಪದೇ ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ವಕೀಲರ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 224 ಕ್ಷೇತ್ರಗಳಲ್ಲಿ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ಪ್ರತಿ ದಿನ ಮೂರು ಕ್ಷೇತ್ರಗಳಿಗೆ ಪ್ರವಾಸ ಕೈಗೊಂಡಿದ್ದೇನೆ. ಈ ಪರಿವರ್ತನಾ ರ್ಯಾಲಿಯಲ್ಲಿ ಮೂರು ಲಕ್ಷ ಜನರು ಭಾಗವಹಿಸಲಿದ್ದಾರೆ. ಸ್ವತಂತ್ರ ಭಾರತದಲ್ಲಿ ಈ ರೀತಿ ರ್ಯಾಲಿ ಎಂದೂ ನಡೆದಿಲ್ಲ. ಇದು ಇತಿಹಾಸ ಸೃಷ್ಟಿಸಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಅಪವಿತ್ರ ಮಾಡಿದ್ದಾರೆ. ಇದು ಮುಖ್ಯಮಂತ್ರಿಗೆ ಕೆಟ್ಟದ್ದಲ್ಲ. ಇದು ಇಡೀ ರಾಜ್ಯದ ಜನರಿಗೆ ಕೆಟ್ಟದ್ದು. ಕೋಟ್ಯಂತರ ಭಕ್ತರ ನಂಬಿಕೆಗೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‍ನ ಯೋಗೀಶ್ವರ್, ಕುಡಚಿ ಶಾಸಕ ಬಿಜೆಪಿಗೆ ಸೇರಲಿದ್ದಾರೆ. ಇನ್ನೂ ಅನೇಕರು ಬಿಜೆಪಿಗೆ ಬರುವವರಿದ್ದಾರೆ. ಈಗಾಗಲೇ ಹಲವಾರು ಕಾಂಗ್ರೆಸ್ ಮತ್ತು ಜೆಡಿಎಸ್‍ನ ಶಾಸಕರು ನಿರಂತರವಾಗಿ ಚರ್ಚೆ ನಡೆಸುತ್ತಿದ್ದಾರೆ ಎಂದರು.

ಇಷ್ಟು ದಿನ ಕಣ್ಮುಚ್ಚಿ ಕುಳಿತಿದ್ದ ಸಿಎಂ ಈಗ ಶೋಭಾ ಕರಂದ್ಲಾಜೆ ಹಾಗೂ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಕೇವಲ ರಾಜಕೀಯ ಗಿಮಿಕ್. ಇದು ರಾಜ್ಯದ ಜನರಿಗೆ ಸೇಡಿನ ರಾಜಕೀಯ ಎಂದು ಗೊತ್ತಾಗಿದೆ. ನನ್ನನ್ನು ಜೈಲಿಗೆ ಕಳುಹಿಸ್ತೀನಿ ಅಂತಾ ಹೇಳ್ತಾರಲ್ಲ ಅವರದು ಎಲುಬಿಲ್ಲದ ನಾಲಿಗೆ. ಶೀಘ್ರದಲ್ಲೇ ಸಿದ್ದರಾಮಯ್ಯ ಹಾಗೂ ಜಾರ್ಜ್ ಮತ್ತಷ್ಟು ಹಗರಣವನ್ನು ಬಯಲು ಮಾಡುತ್ತೇನೆ ಎಂದು ಗುಡುಗಿದರು.

ನನ್ನನ್ನು ಕಂಡರೆ ಎಲ್ಲರೂ ಹೆದರುತ್ತಾರೆ ಅಂತಾರಲ್ಲ. ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಬಾಯಿಗೆ ಬಂದಂತೆ ಮಾತನಾಡುತ್ತದೆ ಎಂದು ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿ.ಸೋಮಣ್ಣ, ಗ್ರಾಮಾಂತರ ಶಾಸಕ ಸುರೇಶ್‍ಗೌಡ ಮತ್ತಿತರರು ಹಾಜರಿದ್ದರು.

Facebook Comments

Sri Raghav

Admin