ಕನ್ನಡ ಭಾಷೆ ಬೆಳೆಸಲು ಸಹಕರಿಸಿ : ಸಚಿವ ಎಚ್.ಸಿ.ಮಹದೇವಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

hc

ಮೈಸೂರು, ನ.1- ಕನ್ನಡ ಭಾಷೆ ಬೆಳೆಯಲು ನಿಮ್ಮೆಲ್ಲರ ಸಹಕಾರ ಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು. ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಇಂದು ಬೆಳಗ್ಗೆ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ರಾಜ್ಯೋತ್ಸವ ಎಂದರೆ ಕೇವಲ ನವೆಂಬರ್ ತಿಂಗಳ ಸಂಭ್ರಮಾಚರಣೆಯಲ್ಲ. ನಮ್ಮ ನಾಡಿನ ಆಡಳಿತವೆಲ್ಲವೂ ಕನ್ನಡ ಭಾಷೆಯಲ್ಲೇ ನಡೆಯಬೇಕು. ನಮ್ಮ ರಾಜ್ಯದ ಅಧಿಕೃತ ಭಾಷೆ ಕನ್ನಡವಾಗಿದೆ ಎಂದು ಹೇಳಿದರು.

ನ್ಯಾಯಾಲಯವು ಒಳಗೊಂಡಂತೆ ಎಲ್ಲ ವ್ಯವಹಾರಗಳು ಕನ್ನಡದಲ್ಲೇ ನಡೆಯಬೇಕು. ಈ ನೆಲದ ಭಾಷೆಯನ್ನು ಉಳಿಸಲು ಅದರ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಕೇವಲ ಸರ್ಕಾರದ ಕಾನೂನು ಕೆಲಸ ಮಾಡುವುದಲ್ಲ. ಭಾಷೆಯ ಬಗ್ಗೆ ಜನರ ಪ್ರೀತಿಯ ಸಹಕಾರ ಬೇಕು ಎಂದರು. ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಬಳಸುವ, ಬೆಳೆಸುವ ಕೆಲಸಗಳು ತುರ್ತಾಗಿ ಆಗಬೇಕಿದೆ. ಕನ್ನಡ ಭಾಷೆ ಬೆಳೆಯಲು ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕನ್ನಡದ ಕಟ್ಟಾಳುವಾಗಿದ್ದು, ಕನ್ನಡ ಭಾಷೆ, ನೆಲ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಸರ್ಕಾರವು ಕರ್ನಾಟಕದ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮೈಸೂರಿನಲ್ಲಿ 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನವೆಂಬರ್ 24, 25, 26ರಂದು ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಕನ್ನಡ ಹಾಗೂ ಕರ್ನಾಟಕ ನಡೆದು ಬಂದ ಹಾದಿ ಬಗ್ಗೆ ವಿವರಿಸಿದರು.
ಸಚಿವರು ಭಾಷಣ ಆರಂಭಿಸುವ ಮುನ್ನ ಇಂದು ಮುಂಜಾನೆ ನಿಧನರಾದ ಶಾಸಕ ಚಿಕ್ಕಮಾದು ಅವರನ್ನು ಸ್ಮರಿಸಿ ಎರಡು ನಿಮಿಷ ಮೌನ ಆಚರಿಸಿದರು. ಸಚಿವರು ಹಾಗೂ ಅಧಿಕಾರಿ ಗಳು ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೂ ಮುನ್ನ ಮೈಸೂರು ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ವೇದಿಕೆ ಬಳಿ ಭುವನೇಶ್ವರಿ ದೇವಿಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಕೆಎಸ್‍ಆರ್‍ಪಿ, ಸಿಎಆರ್, ಮಹಿಳಾ ಪೊಲೀಸ್, ಅಶ್ವಾರೋಹಿ ಪಡೆ,ಪೊಲೀಸ್ ಬ್ಯಾಂಡ್ ಸೇರಿದಂತೆ ವಿವಿಧ ಸೇವಾ ಪಡೆಗಳು ಪಥ ಸಂಚಲನ ನಡೆಸಿದವು. ಕೆಆರ್ ವೃತ್ತ, ಸಯ್ಯಾಜಿರಾವ್ ರಸ್ತೆ, ಅಶೋಕ ವೃತ್ತ ಸೇರಿದಂತೆ ನಗರದ ವಿವಿಧೆಡೆ ಮೆರವಣಿಗೆ ಸಾಗಿಬಂದವು.  ಸಮಾರಂಭದಲ್ಲಿ ಮೇಯರ್ ರವಿಕುಮಾರ್, ಜಿಲ್ಲಾಧಿಕಾರಿ ರಂದೀಪ್, ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಸೇರಿದಂತೆ ಮತ್ತಿತರರಿದ್ದರು.

Facebook Comments

Sri Raghav

Admin