ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ : ಸಚಿವ ಟಿ.ಬಿ.ಜಯಚಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

Tuma
ತುಮಕೂರು, ನ.1- ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇದಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು. ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾಡ ಧ್ವಜಾರೋಹಣ ನೆರವೇರಿಸಿ ತೆರದ ವಾಹನದಲ್ಲಿ ತುಕಡಿಗಳ ಪರಿವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು, ಸುಮಾರು 19 ವಿವಿಧ ಭಾಗಗಳಲ್ಲಿ ಹಂಚಿ ಹೋಗಿದ್ದ ಕನ್ನಡ ಭಾಷೆ, ಪ್ರದೇಶಗಳು ಒಂದಾಗಿ ಅಖಂಡ ಕರ್ನಾಟಕ ರಚನೆಯಾಗಬೇಕೆಂಬ ಕನಸು ನನಸಾಗಿ ಇಂದಿಗೆ 62 ವರ್ಷಗಳು ಪೂರ್ಣಗೊಂಡಿದ್ದು, 62ನೆ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಇದು ಹೆಮ್ಮೆಯ ಸಂಗತಿಯಾಗಿದೆ.

61 ವರ್ಷಗಳಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ದೇಶದ ಇತರ ರಾಜ್ಯಗಳಿಗಿಂತ ಕರ್ನಾಟಕ ರಾಜ್ಯ ಅಭಿವೃದ್ಧಿಯ ಮುಂಚೂಣಿಯಲ್ಲಿದೆ. ತುಮಕೂರು ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ, ಎಚ್‍ಎಎಲ್ ಹೆಲಿಕಾಪ್ಟರ್ ಕಾರ್ಖಾನೆ, ಪಾವಗಡದಲ್ಲಿ ಸೋಲಾರ್ ಪಾರ್ಕ್, ಸ್ಮಾರ್ಟ್ ಸಿಟಿ ಸೇರಿದಂತೆ ವಿಶ್ವದ ಪ್ರತಿ ದೇಶಗಳಿಂದ ತುಮಕೂರಿನಲ್ಲಿರುವ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 13 ಸಾವಿರ ಎಕರೆ ಪ್ರದೇಶದಲ್ಲಿ ನೂರಾರು ಕಾರ್ಖಾನೆಗಳು ಬಂದಿವೆ. ಇದು ನಮ್ಮ ರಾಜ್ಯದ ಹೆಮ್ಮೆಯ ವಿಷಯವಾಗಿದೆ ಎಂದರು.
ಕಲೆ, ಸಾಹಿತ್ಯ, ಕ್ರೀಡೆ, ಶಿಕ್ಷಣ, ವಿಜ್ಞಾನ, ಮಾಧ್ಯಮ, ಎಲ್ಲಾ ರಂಗಗಳಲ್ಲಿಯೂ ಜಿಲ್ಲೆ ಸಾಕಷ್ಟು ಅಭಿವೃದ್ಧಿಯಾಗಿದೆ. ಕೃಷಿಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆ ಬರಗಾಲದಿಂದ ತತ್ತರಿಸಿ ಹೋಗಿತ್ತು. ಆದರೆ ವರುಣನ ಕೃಪೆಯಿಂದ ಜಿಲ್ಲೆಯು ನಿಟ್ಟುಸಿರು ಬಿಡುವಂತಾಗಿದೆ.

ಅಂತರ್ಜಲ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ತುಮಕೂರು ನಗರದ ಅಮಾನಿಕೆರೆ, ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ನೀರು ಹರಿಸುವ ಮೂಲಕ ಸಾವಿರಾರು ರೈತರ ದಣಿವನ್ನು ನೀಗಿಸಿದಂತಾಗಿದೆ. ಬರದ ಸಂದರ್ಭದಲ್ಲಿ ನೆರವಾಗಿ ನಿಲ್ಲುವುದು ಸರ್ಕಾರದ ಕರ್ತವ್ಯವಾಗಿದೆ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರು ಸಹಕಾರಿ ಬ್ಯಾಂಕ್‍ಗಳಲ್ಲಿ ಮಾಡಿದ 50 ಸಾವಿರ ಸಾಲವನ್ನು ಮನ್ನಾ ಮಾಡಿದ್ದಾರೆ. ತೋಟಗಾರಿಕೆ, ಕೈಗಾರಿಕೆ, ಕಾನೂನು ಸುವ್ಯವಸ್ಥೆ, ಸೋಲಾರ್ ಪಾರ್ಕ್ ಹಾಗೂ ತುಮಕೂರು ನಗರದಲ್ಲಿ ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಡಾ.ರಫೀಕ್ ಅಹಮದ್, ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹ ಮೂರ್ತಿ, ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಮತ್ತಿತರರು ಇದ್ದರು.

Facebook Comments

Sri Raghav

Admin