ಡಿಜಿ ನೇಮಕದಲ್ಲಿ ಕನ್ನಡಿಗರ ಕಡೆಗಣನೆ, ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕರ ಬೇಸರ

ಈ ಸುದ್ದಿಯನ್ನು ಶೇರ್ ಮಾಡಿ

kISHOR-cHANDRA-ips--01

ಬೆಂಗಳೂರು, ನ.1- ಅರವತ್ತೆರಡನೆ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಾದರೂ ಕನ್ನಡಿಗ ಅಧಿಕಾರಿಯೊಬ್ಬರಿಗೆ ಪೊಲೀಸ್ ಮಹಾನಿರ್ದೇಶಕರ ಹುದ್ದೆ ಲಭಿಸಬಹುದು ಎಂದು ಭಾವಿಸಿದ್ದ ಕನ್ನಡಿಗರಿಗೆ ಭಾರೀ ನಿರಾಸೆಯಾಗಿದೆ. ಪೊಲೀಸ್ ಮಹಾನಿರ್ದೇಶಕರಾಗಿದ್ದ ಆರ್.ಕೆ.ದತ್ತ ಅವರ ನಿವೃತ್ತಿಯಿಂದ ತೆರವಾಗಿದ್ದ ಡಿಜಿ ಮತ್ತು ಐಜಿ ಹುದ್ದೆ ಸ್ಥಳೀಯ ಹಾಗೂ ಕನ್ನಡಿಗ ದಕ್ಷ ಅಧಿಕಾರಿಯಾಗಿರುವ ಎಚ್.ಸಿ.ಕಿಶೋರ್‍ಚಂದ್ರ ಅವರಿಗೆ ಲಭಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ಕೇವಲ ಸೇವಾ ಹಿರಿತನದ ಆಧಾರದ ಮೇಲೆ ತಮ್ಮ ಸರ್ವೀಸ್‍ನ 23 ವರ್ಷಗಳನ್ನು ಕೇಂದ್ರ ಸೇವೆಯಲ್ಲೇ ಕಳೆದಿರುವ ನೀಲಮಣಿ ರಾಜು ಅವರಿಗೆ ಪೊಲೀಸ್ ಮಹಾನಿರ್ದೇಶಕರ ಪಟ್ಟ ಕಟ್ಟುವ ಮೂಲಕ ಸರ್ಕಾರ ಮತ್ತೆ ಹೊರರಾಜ್ಯದ ಅಧಿಕಾರಿಗಳಿಗೆ ಮಣೆ ಹಾಕಿದೆ.23 ವರ್ಷಗಳ ಕಾಲ ಕೇಂದ್ರ ಸೇವೆಯಲ್ಲೇ ಕಳೆದಿರುವ ನೀಲಮಣಿ ಎನ್.ರಾಜು ಅವರಿಗೆ ರಾಜ್ಯದ ಬಗ್ಗೆ ಹೆಚ್ಚಿನ ಅರಿವಿಲ್ಲ. ಇವರ ಬದಲು ರಾಜ್ಯದಲ್ಲಿ ಸೇವೆ ಸಲ್ಲಿಸಿರುವ, ಹೆಚ್ಚು ಅನುಭವ ಹೊಂದಿರುವ, ರಾಜ್ಯದವರೇ ಆದ ಕಿಶೋರ್ ಚಂದ್ರ ಅವರಿಗೆ ನೀಡಿದ್ದರೆ ಕನ್ನಡಿಗರಿಗೆ ಆದ್ಯತೆ ನೀಡಿದಂತಾಗುತ್ತಿತ್ತು. ಆದರೆ, ಸರ್ಕಾರ ಕಿಶೋರ್‍ಚಂದ್ರ ಅವರಿಗೆ ಮಣೆ ಹಾಕದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರದ ಈ ನಿರ್ಧಾರದಿಂದ ಇನ್ನೂ 15 ವರ್ಷಗಳ ಕಾಲ ಯಾವೊಬ್ಬ ಕನ್ನಡಿಗ ಪೊಲೀಸ್ ಅಧಿಕಾರಿಯೂ ಡಿಜಿ ಮತ್ತು ಐಜಿ ಹುದ್ದೆ ಅಲಂಕರಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 1956ರಿಂದ ಇದುವರೆಗೂ 37 ಹಿರಿಯ ಪೊಲೀಸ್ ಅಧಿಕಾರಿಗಳು 40 ಬಾರಿ ಪೊಲೀಸ್ ಮಹಾನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಕೇವಲ ಆರೇಳು ಮಂದಿ ಮಾತ್ರ ಕನ್ನಡಿಗ ಅಧಿಕಾರಿಗಳು ಎಂಬುದು ಮಾತ್ರ ವಿಪರ್ಯಾಸ.

ಪೊಲೀಸ್ ವರಿಷ್ಠಾಧಿಕಾರಿಗಳಿಗೆ 1956ರಿಂದ 1980ರ ವರೆಗೂ ಐಜಿಪಿ ಹುದ್ದೆ ಮೀಸಲಿರಿಸಲಾಗಿತ್ತು. 1980ರ ನಂತರ ಆ ಹುದ್ದೆಯನ್ನು ಡಿಜಿ ಮತ್ತು ಐಜಿ ಹುದ್ದೆಗೆ ಮೇಲ್ದರ್ಜೆಗೇರಿಸಲಾಗಿತ್ತು. ಅಲ್ಲಿಂದ ಇಲ್ಲಿನವರೆಗೂ 37 ಅಧಿಕಾರಿಗಳು ಪೊಲೀಸ್ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು ಬಹುತೇಕ ಹೊರರಾಜ್ಯದ ಅಧಿಕಾರಿಗಳೇ. ಎಸ್.ಎನ್.ಹೊಸಳ್ಳಿ, ಎಚ್.ವೀರ ಭದ್ರಯ್ಯ, ಬಿ.ಎನ್.ಗರುಡಾಚಾರ್, ಎ.ಆರ್.ನಿಜಾಮುದ್ದೀನ್, ಎಫ್.ಟಿ.ಆರ್. ಕೊಲಾಸೊ ಎ.ಎಸ್., ಮಳೂರ್‍ಕರ್, ಟಿ.ಮಡಿಯಾಳ್, ಶಂಕರ ಬಿದರಿಯಂತಹ ಬೆರಳೆಣಿಕೆಯಷ್ಟು ಕನ್ನಡಿಗ ಅಧಿಕಾರಿಗಳಿಗೆ ಮಾತ್ರ ಪೊಲೀಸ್ ಮಹಾನಿರ್ದೇಶಕರ ಹೊಣೆ ನಿರ್ವಹಿಸುವ ಅದೃಷ್ಟ ದೊರೆತಿದೆ.

ಮತ್ತೆ ಇಂತಹ ಅದೃಷ್ಟ ದೊರೆಯಬೇಕಾದರೆ ಕನ್ನಡಿಗ ಅಧಿಕಾರಿಗಳು ಬರೋಬ್ಬರಿ 15 ವರ್ಷ ಕಾಯಲೇ ಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಮಹಾನಿರ್ದೇಶಕರಂತಹ ಮಹತ್ವದ ಹುದ್ದೆ ಮತ್ತೆ ಕನ್ನಡಿಗ ಅಧಿಕಾರಿಗೆ ದೊರೆಯುವುದು 15 ವರ್ಷಗಳ ನಂತರ. ಬೆಂಗಳೂರು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಹಿತೇಂದ್ರ ಅವರಿಗೆ ಡಿಜಿ ಹುದ್ದೆ ದೊರೆತಾಗ ಮಾತ್ರ ಎನ್ನುವುದು ಕನ್ನಡಿಗರ ದುರ್ದೈವ.

2012ರಲ್ಲಿ ಶಂಕರ ಬಿದರಿಯವರು ಪೊಲೀಸ್ ಮಹಾನಿರ್ದೇಶಕರಾಗಿ ನಿವೃತ್ತರಾದ ನಂತರ ಡಿಜಿ ಪಟ್ಟ ಕಿಶೋರ್‍ಚಂದ್ರ ಅವರಿಗೆ ದೊರೆಯಲಿದೆ ಎಂದೇ ಭಾವಿಸಲಾಗಿತ್ತು. ಡಿಜಿ ಆಯ್ಕೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ವಿವೇಚನೆ ಬಳಸಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂದೇ ಗುರುತಿಸಿಕೊಂಡಿರುವ ಕಿಶೋರ್‍ಚಂದ್ರ ಅವರಿಗೆ ಡಿಜಿ ಪಟ್ಟ ದಯಪಾಲಿಸಿದ್ದರೆ ಕನ್ನಡಿಗರಿಗೆ ಅಲ್ಪಸ್ವಲ್ಪ ಸಮಾಧಾನವಾಗುತ್ತಿತ್ತು. ಆದರೆ, ಅದ್ಯಾಕೋ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡಿಗ ಅಧಿಕಾರಿ ಯನ್ನು ಕಡೆಗಣಿಸಿ ಮತ್ತೆ ಹೊರ ರಾಜ್ಯದ ನೀಲಮಣಿ ರಾಜು ಅವರಿಗೆ ಮಹಾ ನಿರ್ದೇಶಕರ ಹುದ್ದೆ ದಯಪಾಲಿಸಿದ್ದಾರೆ. ಮುಖ್ಯಮಂತ್ರಿಗಳ ಈ ನಿರ್ಧಾರದಿಂದ ಕನ್ನಡಿಗರಿಗೆ ಭ್ರಮ ನಿರಸನವಾಗಿರುವುದಂತೂ ಸತ್ಯ.

Facebook Comments

Sri Raghav

Admin