ಸಿಎಂ ಪುತ್ರ ಡಾ. ಯತೀಂದ್ರಗೆ ಬಿಗ್ ರಿಲೀಫ್

ಈ ಸುದ್ದಿಯನ್ನು ಶೇರ್ ಮಾಡಿ

Yateendra

ಬೆಂಗಳೂರು, ನ.2- ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಪುತ್ರ ಡಾ.ಯತೀಂದ್ರ ಅವರಿಗೆ ಬಿಗ್ ರಿಲೀಫ್ ದೊರೆತಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ಸ್ವಸ್ಥ ಸುರಕ್ಷಾ ಯೋಜನೆಯಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಒಡೆತನದ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ನಿಯಮ ಬಾಹಿರವಾಗಿ ಟೆಂಡರ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಈ ಕುರಿತಂತೆ ದಾಖಲಾಗಿದ್ದ ಪ್ರಕರಣವನ್ನು ಖುಲಾಸೆ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ ಆರೋಪಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿಕೆ ನೀಡಿದೆ. ಡಾ.ಯತೀಂದ್ರ ಅವರ ವಿರುದ್ಧ ಆರೋಪ ಕೇಳಿಬಂದ ಕೂಡಲೇ ಅವರು ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಕುರಿತಂತೆ ಸಾಮಾಜಿಕ ಕಾರ್ಯಕರ್ತ ಎಸ್.ಭಾಸ್ಕರನ್ ಎಂಬುವರು ಕಳೆದ ಮೇ 2016ರಲ್ಲಿ ಎಸಿಬಿಗೆ ದೂರು ನೀಡಿದ್ದರು.  ದೂರು ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ ಎಸಿಬಿ ಅಧಿಕಾರಿಗಳು ಭಾಸ್ಕರನ್ ಸಲ್ಲಿಸಿದ ದೂರಿನಲ್ಲಿ ಆಪಾದನೆಗಳು ಸಾಬೀತಾಗದ ಕಾರಣ ದೂರು ಅರ್ಜಿಯನ್ನು ವಿಚಾರಣೆಯಿಂದ ಮುಕ್ತಾಯಗೊಳಿಸಲಾಗಿದೆ ಎಂದು ಎಸಿಬಿ ಪೊಲೀಸ್ ಉಪಾಧೀಕ್ಷಕ ವಜೀರ್ ಆಲಿಖಾನ್ ಸ್ಪಷ್ಟನೆ ನೀಡಿದ್ದಾರೆ.

ಆಕ್ರೋಶ: ವಿಚಾರಣೆ ಸಂದರ್ಭದಲ್ಲಿ ತಮ್ಮ ಹೇಳಿಕೆ ಪಡೆಯದೆ ಎಸಿಬಿ ಅಧಿಕಾರಿಗಳು ಪ್ರಕರಣಕ್ಕೆ ತಿಲಾಂಜಲಿ ಇಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾಮಾಜಿಕ ಕಾರ್ಯಕರ್ತ ಭಾಸ್ಕರನ್ ಅವರು ಹೈಕೋರ್ಟ್‍ನಲ್ಲಿ ಕಾನೂನು ಸಮರ ಆರಂಭಿಸುವುದಾಗಿ ಹೇಳಿಕೆ ನೀಡಿದ್ದಾರೆ.

Facebook Comments

Sri Raghav

Admin