ಹೈನುಗಾರಿಕೆಯಿಂದ ಆರ್ಥಿಕ ಅಭಿವೃದ್ಧಿ: ಸಚಿವ ಟಿ.ಬಿ ಜಯಚಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

tumakuru
ತುಮಕೂರು, ನ.2- ಕೃಷಿಯೊಂದಿಗೆ ಹೈನುಗಾರಿಕೆಯನ್ನು ಅಳವಡಿಸಿಕೊಂಡರೆ ಅರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ ಜಯಚಂದ್ರ ರೈತರಿಗೆ ಕರೆ ನೀಡಿದರು. ತಾಲೂಕಿನ ಕೋರಾ ಹೋಬಳಿಯ ಚಿಕ್ಕಗುಂಡಗಲ್ಲು ಗ್ರಾಮದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವ ಇಲಾಖೆ, ತುಮಕೂರು ಹಾಲು ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ 13ನೇ ಸುತ್ತಿನ ರಾಷ್ಟ್ರೀಯ ಕಾಲು-ಬಾಯಿಜ್ವರ ನಿಯಂತ್ರಣ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ರಾಸುಗಳಿಗೆ ಚಿಕಿತ್ಸೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರು ಬರೀ ಕೃಷಿಯನ್ನೆ ನಂಬಿ ಬದುಕುವ ಬದಲು ಕೃಷಿಯೊಂದಿಗೆ ಹೈನು ಉದ್ಯಮವನ್ನು ಮಾಡಿದಾಗ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಸಣ್ಣ ರೈತರು ತಮ್ಮ ಹೊಲದಲ್ಲಿಯೇ ಮೇವನ್ನು ಬೆಳೆಯುವ ಮೂಲಕ ಹೈನು ಉದ್ಯಮ ಮಾಡಬೇಕು, ಹೆಚ್ಚು ಹಾಲು ಕರೆಯುವಂತಹ ಹಸುಗಳನ್ನು ಕಟ್ಟಿಕೊಂಡು ಹಾಲು ಉತ್ಪಾದನೆ ಮಾಡುವ ಮೂಲಕ ಕುಟುಂಬದ ವಾರ್ಷಿಕ ವರಮಾನವನ್ನು ಹೆಚ್ಚಿಸ ಬೇಕು ಎಂದು ತಿಳಿಸಿದರು. ಶಾಸಕ ಸುಧಾಕರ್ ಲಾಲ್ ಮಾತನಾಡಿ, ಹಳ್ಳಿಗಳಲ್ಲಿ ಹೈನು ಉದ್ಯಮ ಅಭಿವೃದ್ಧಿಯಾಗಬೇಕಾದರೆ ಜಲ ವೃದ್ಧಿಯಾಗಬೇಕು,ಇದರಿಂದಾಗಿ ಕೊಳವೆ ಬಾವಿಗಳು ಮರುಪೂರ್ಣಗೊಂಡು ಮೇವು ಬೆಳೆಯಲು ಸಾಧ್ಯವಾಗುತ್ತದೆ. ಹಾಗಾಗಿ ತಾಲೂಕಿನಲ್ಲಿ ಅಗತ್ಯವಿರುವ ಕಡೆಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.
ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಗ್ರಾಮೀಣ ಭಾಗದ ರೈತರು ಹಾಗೂ ಬಡವರು ಹಸು ಸಾಕುವ ಮೂಲಕ ಹಾಲು ಉತ್ಪಾಧನೆ ಮಾಡಿ ಕುಟುಂಬದ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ.ಸರಕಾರ ಹಲವಾರು ಯೋಜೆನಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು. ತಾಪಂ ಇಒ ಡಾ.ಕೆ.ನಾಗಣ್ಣ, ತಾಪಂ ಅಧ್ಯಕ್ಷ ಗಂಗಾಂಜನೇಯ, ಜಿಪಂ ಸದಸ್ಯ ಲಕ್ಷ್ಮೀನರಸಯ್ಯ, ತಾಪಂ ಸದಸ್ಯೆ ಲಕ್ಷ್ಮೀ ರವಿಕೀರ್ತಿ, ಗ್ರಾ.ಪಂ ಅಧ್ಯಕ್ಷ ಮಂಜುನಾಥ್, ಪಶುಪಾಲನ ಇಲಾಖೆಯ ಉಪನಿರ್ದೇಶಕ ಡಾ.ಕೆ.ಹೆಚ್.ಶಿವರುದ್ರಪ್ಪ, ಡಾ.ಜಿ.ಸಂಜೀವರಾಯ, ಕೃಷ್ಣಾ ನಾಯಕ್, ಡಾ.ಶ್ರೀಧರ್ ಭಾಗವಹಸಿದ್ದರು.

Facebook Comments