ಕಾಯ್ದೆ ರೂಪಿಸುವ ಮುನ್ನವೇ ಮುಷ್ಕರ : ಸಿಎಂ ಸಿದ್ದರಾಮಯ್ಯಗರಂ

ಈ ಸುದ್ದಿಯನ್ನು ಶೇರ್ ಮಾಡಿ

cm
ಬೆಂಗಳೂರು, ನ.3- ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ಅಂಗೀಕಾರಕ್ಕೂ ಮುನ್ನವೇ ಖಾಸಗಿ ಆಸ್ಪತ್ರೆ ವೈದ್ಯರು ಪ್ರತಿಭಟನೆಗಿಳಿದಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ವೈದ್ಯರಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು. ಇಂಡಿಯನ್ ರೋಡ್ ಕಾಂಗ್ರೆಸ್ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ಜಾರಿಗೆ ತರಬೇಕೆಂದು ಮುಂದಾಗಿದ್ದೇವೆ. ಈ ಬಗ್ಗೆ ಜನ ಏನು ಹೇಳುತ್ತಾರೆಂದು ಕಾಯುತ್ತಿದ್ದೇವೆ. ಮಸೂದೆ ಮಂಡನೆಗೂ ಮನ್ನವೇ ವೈದ್ಯರು ಪ್ರತಿಭಟನೆಗೆ ಇಳಿದಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಪ್ರತಿಭಟನೆ ನಡೆಸುತ್ತಿರುವುದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಅಗತ್ಯ ಔಷಧಿ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಜರಿರಬೇಕು. ವೈದ್ಯರು ಮುಷ್ಕರ ಮಾಡುವ ಅಗತ್ಯವಿರಲಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ದಿಮಾಕಿನಿಂದ ಮಾತನಾಡುತ್ತಾರೆ. ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರು ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಯಡಿಯೂರಪ್ಪನವರನ್ನು ಈಗಾಗಲೇ ಜನ ಮನೆಗೆ ಕಳುಹಿಸಿದ್ದಾರೆ. ಅವರು ಪರಿವರ್ತನಾ ರ್ಯಾಲಿ ನಡೆಸುತ್ತಿದ್ದಾರೆ. ಆ ರ್ಯಾಲಿ ಎಲ್ಲೆಲ್ಲಿ ಹೋಗುತ್ತದೆಯೋ ಅಲ್ಲೆಲ್ಲ ಕಾಂಗ್ರೆಸ್‍ನ ಶಕ್ತಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಅವರು ಹೇಳಿದರು. ಟಿಪ್ಪು ಸುಲ್ತಾನ್ ಜಯಂತಿ ಬಗ್ಗೆ ಪ್ರಸ್ತಾಪಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಇತಿಹಾಸ ಗೊತ್ತಿಲ್ಲ. ರಾಷ್ಟ್ರಪತಿಯವರೇ ಟಿಪ್ಪು ಅವರ ಇತಿಹಾಸದ ಬಗ್ಗೆ ಮಾತನಾಡಿದ್ದಾರೆ. ಇತಿಹಾಸ ಗೊತ್ತಿಲ್ಲದ ಅಮಿತ್ ಷಾ ಅವರು ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಕೇಂದ್ರದ ಅನುದಾನ ಬಳಕೆಯಾಗಿಲ್ಲ ಎಂಬುದರ ಬಗ್ಗೆ ಬಿಎಸ್‍ವೈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಅವರು, ವಿಧಾನಸಭೆಯಲ್ಲಿ ಬಿಜೆಪಿಯೇ ಅಧಿಕೃತ ವಿರೋಧ ಪಕ್ಷವಾಗಿದೆ. ಅಲ್ಲಿ ಏಕೆ ಪ್ರಶ್ನೆ ಮಾಡಬಾರದು. ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇವೆ ಎಂದು ತಿಳಿಸಿದರು.

Facebook Comments

Sri Raghav

Admin