ಈ ಬಾರಿ ಜೆಡಿಎಸ್ ಕಿಂಗ್ ಮೇಕರ್ ಅಲ್ಲ ಕಿಂಗ್ ಆಗುತ್ತೆ : ವೈ.ಎಸ್.ವಿ.ದತ್ತಾ

ಈ ಸುದ್ದಿಯನ್ನು ಶೇರ್ ಮಾಡಿ

Y-S-V-Datta

ಚಿಕ್ಕಮಗಳೂರು, ನ.3-2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕಿಂಗ್ ಮೇಕರ್ ಆಗುವುದಿಲ್ಲ, ಕಿಂಗ್ ಆಗಲಿದೆ ಎಂದು ಕಡೂರು ಶಾಸಕ ವೈ.ಎಸ್.ವಿ.ದತ್ತ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಬಗ್ಗೆ ತಿರಸ್ಕಾರ ಮನೋಭಾವ ಬಂದಿದೆ. ಆದರೆ ರಾಜ್ಯದಲ್ಲಿ ಜೆಡಿಎಸ್ ಪರವಾದ ಅಲೆ ಇದ್ದು, ಮತದಾರರು ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ಈ ಬಾರಿ 110 ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ದತ್ತ, ಬೇರೆ ಪಕ್ಷದಿಂದ ಕರೆತಂದು ಚುನಾವಣೆಗೆ ನಿಲ್ಲಿಸುವ ದಿವಾಳಿತನಕ್ಕೆ ಪಕ್ಷ ತಲುಪಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಅಭ್ಯರ್ಥಿಗಳು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ ಎಂದರು.

ಈ ಬಾರಿ ಚುನಾವಣೆಯಲ್ಲಿ ಸಾಹಿತ್ಯಕ ಮತ್ತು ಸಂಘಟನಾತ್ಮಕವಾಗಿ ಜನರನ್ನು ತಲುಪುವ ಪ್ರಚಾರ ಮಾಡಲಿದ್ದೇವೆ. ಸಾಹಿತ್ಯ ಎಂದರೆ ದೇವೇಗೌಡರ ಆತ್ಮಚರಿತ್ರೆ. ಇದನ್ನು ನವೆಂಬರ್ ಕೊನೆ ವಾರದಲ್ಲಿ ಬಿಡುಗಡೆ ಮಾಡಲಿದ್ದು, ಇದರಲ್ಲಿ 3 ಭಾಗಗಳಿವೆ ಎಂದು ಹೇಳಿದರು. ಈ ಪುಸ್ತಕದಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷದ ಅಗತ್ಯತೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಮೊದಲ ಭಾಗ ದೇವೇಗೌಡರ ಖಾಸಗಿತನವಾಗಿದ್ದು, ಇದನ್ನು ಶೈಲಾ ಚಂದ್ರಶೇಖರ್ ಬರೆದಿದ್ದಾರೆ. 2ನೇ ಭಾಗವಾದ ಸಾರ್ವಜನಿಕ ಬದುಕು ಮತ್ತು ರಾಜಕಾರಣದ ಬಗ್ಗೆ ಸಂಕ್ಷಿಪ್ತ ಮಾಹಿತಿ ಇದೆ. 3ನೇ ಭಾಗ ಅನುಬಂಧಗಳು ಈ ಎರಡು ಭಾಗವನ್ನು (ವೈಎಸ್‍ವಿ ದತ್ತ) ನಾನು ಬರೆದಿದ್ದೇನೆ. ಆತ್ಮಚರಿತ್ರೆಯ ಆಡಿಯೋ ಕೂಡ ರೆಡಿಯಾಗಿದ್ದು,ಆ ಆಡಿಯೋಗೆ ನಾನೇ ಸತತ 10 ಗಂಟೆ ಮಾತನಾಡಿದ್ದೇನೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನತಾಪರಿವಾರದ ಮರು ಹೊಂದಾಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಪಕ್ಷದಿಂದ ಹೊರ ಹೋದವರೆಲ್ಲ ಪುನಃ ಪಕ್ಷಕ್ಕೆ ಸೇರ್ಪಡೆಗೊಂಡು ಜೆಡಿಎಸ್ ಹೊಸ ರೂಪ ಪಡೆಯಲಿದೆ ಎಂದರು.

ಚುನಾವಣೆ ಪ್ರಚಾರ ಕಾರ್ಯಕ್ಕೆ 2 ತಂಡಗಳನ್ನು ಈಗಾಗಲೇ ರಚನೆ ಮಾಡಲಾಗಿದ್ದು, ಒಂದು ತಂಡದ ನೇತೃತ್ವವವನ್ನು ದೇವೇಗೌಡರು, ಮತ್ತೊಂದು ತಂಡದ ನೇತೃತ್ವವನ್ನು ಎಚ್.ಡಿ.ಕುಮಾರಸ್ವಾಮಿ ವಹಿಸಲಿದ್ದಾರೆ ಎಂದು ಹೇಳಿದರು. ಅಜ್ಜಂಪುರ ತಾಲೂಕು ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಸಭೆ ಕರೆದು ನಮ್ಮೊಂದಿಗೆ ಚರ್ಚಿಸಿದ್ದಾರೆ. ಚೌಳ ಹಿರಿಯೂರು, ಹಿರೇನಲ್ಲೂರು ಹೋಬಳಿಗಳ 50 ಗ್ರಾಮಗಳು ಕಡೂರು ತಾಲೂಕಿನಿಂದ ಬೇರ್ಪಡಿಸಿ ಅಜ್ಜಂಪುರಕ್ಕೆ ಸೇರಿಸಲು ಪಟ್ಟಿ ಮಾಡಲಾಗಿದೆ. ಇದಕ್ಕೆ ತಾವು ವೈಜ್ಞಾನಿಕವಾಗಿ ಮತ್ತೊಮ್ಮೆ ಸಮೀಕ್ಷೆ ನಡೆಸಿ ಸುಮಾರು 20 ಗ್ರಾಮಗಳನ್ನು ಪಟ್ಟಿಯಿಂದ ಕೈ ಬಿಡುವಂತೆ ಸೂಕ್ತ ಕಾರಣ ನೀಡಿ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು. ಅಜ್ಜಂಪುರ ತಾಲೂಕು ಕೇಂದ್ರಕ್ಕೆ ಸೇರಿಸಲು ಅವೈಜ್ಞಾನಿಕವಾಗಿ ಗ್ರಾಮಗಳ ಪಟ್ಟಿ ಮಾಡಲಾಗಿದೆ. ಯಾವುದೇ ಸೂಕ್ತ ಮಾನದಂಡ ಅನುಸರಿಸಿಲ್ಲ. ತಾಲೂಕು ಕೇಂದ್ರ ಮತ್ತು ಗ್ರಾಮಗಳಿಗೂ ಇರುವ ದೂರವನ್ನು ಲೋಕೋಪಯೋಗಿ ಇಲಾಖೆಯಿಂದ ಮತ್ತೊಮ್ಮೆ ಸಮೀಕ್ಷೆ ನಡೆಸಬೇಕೆಂದು ಜಿಲ್ಲಾಧಿಕಾರಿಗೆ ತಿಳಿಸಿರುವುದಾಗಿ ಹೇಳಿದರು.

Facebook Comments