ಅಕ್ರಮ ಮಳಿಗೆ ನಿರ್ಮಿಸಿ ಕೋಟಿಗಟ್ಟಲೆ ಹಣ ನುಂಗಿದ ಮಾಜಿ ಮೇಯರ್ ಪದ್ಮಾವತಿ..!

ಈ ಸುದ್ದಿಯನ್ನು ಶೇರ್ ಮಾಡಿ

Padmavathi-0002

ಬೆಂಗಳೂರು, ನ.4- ಮಾಜಿ ಮೇಯರ್ ಜಿ.ಪದ್ಮಾವತಿ, ಶಾಸಕ ಆರ್.ವಿ.ದೇವರಾಜ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷೆ ಗಾಯತ್ರಿ ಅವರು ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ಕಾಮನ್ ಪ್ಯಾಸೇಜ್, ಶೌಚಾಲಯ, ಸ್ಟೇರ್ ಕೇಸ್ ಸಂದುಗೊಂದುಗಳಲ್ಲಿ ಕಾನೂನು ಬಾಹಿರವಾಗಿ 24 ಮಳಿಗೆಗಳನ್ನು ನಿರ್ಮಿಸಿ ಒಂದೊಂದು ಮಳಿಗೆಯನ್ನು 50 ಲಕ್ಷಕ್ಕೆ ಮಾರಾಟ ಮಾಡುವ ಮೂಲಕ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ಪಾರದರ್ಶಕ ಆಡಳಿತ ನಡೆಸುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಪದೇ ಪದೇ ಹೇಳುತ್ತಾರೆ. ಕೂಡಲೇ ಈ ಅಕ್ರಮ ಮಳಿಗೆಗಳನ್ನು ರದ್ದುಗೊಳಿಸಿ ಪ್ರಕರಣವನ್ನು ಎಸಿಬಿ ತನಿಖೆಗೆ ವಹಿಸಲಿ ಎಂದು ಪತ್ರಿಕಾಗೋಷ್ಠಿಯಲ್ಲಿಂದು ಅವರು ಮನವಿ ಮಾಡಿದರು. ಟೆಂಡರ್ ಕರೆಯದೆ ಯಾವುದೇ ಮಳಿಗೆಯಾಗಲಿ ಅಥವಾ ಆಸ್ತಿಯಾಗಲಿ ಹಂಚಿಕೆ ಮಾಡಬಾರದೆಂದು ಸರ್ಕಾರದ ಸುತ್ತೋಲೆ ಇದೆ. ಆದರೆ ಶಾಸಕ ಆರ್.ವಿ.ದೇವರಾಜ್, ಜಿ.ಪದ್ಮಾವತಿ ಅವರು ಸ್ಥಾಯಿ ಸಮಿತಿ ಅಧ್ಯಕ್ಷೆ ಗಾಯಿತ್ರಿ ಅವರ ಮೇಲೆ ಒತ್ತಡ ಹೇರಿ ಅಕ್ರಮವಾಗಿ 24 ಮಳಿಗೆ ಹಂಚಿಕೆ ಮಾಡಿದ್ದಾರೆ ಎಂದು ದೂರಿದರು.
ಕೆ.ಆರ್.ಮಾರುಕಟ್ಟೆ ನಿರ್ಮಾಣ ಸಂದರ್ಭದಲ್ಲಿ ಬೆಂಗಳೂರಿನ ಜನಸಂಖ್ಯೆ 80 ಲಕ್ಷ ಇತ್ತು. ನಗರದಲ್ಲಿ ಈಗ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಕೆ.ಆರ್.ಮಾರುಕಟ್ಟೆಯಲ್ಲಿ ಜನ ಓಡಾಡಲು ಕಷ್ಟ. ಇದೆಲ್ಲಾ ತಿಳಿದಿದ್ದರೂ ದೇವರಾಜ್, ಪದ್ಮಾವತಿ ಕಾಮನ್ ಪ್ಯಾಸೇಜ್‍ಸ್ಟೇರ್‍ಕೇಸ್‍ಗಳಲ್ಲಿ ಅಕ್ರಮವಾಗಿ ಮಳಿಗೆ ನಿರ್ಮಾಣ ಮಾಡಿದ್ದಾರೆ. ಮಳಿಗೆ ನಿರ್ಮಾಣವಾದ ನಂತರ ಶಾಸಕ ಆರ್.ವಿ.ದೇವರಾಜ್ 4.9.2017ರಂದು ಅಂದಿನ ಮೇಯರ್ ಜಿ.ಪದ್ಮಾವತಿ ಅವರಿಗೆ ಪತ್ರ ಬರೆದು ನಾನು ಸೂಚಿಸುವ ಫಲಾನುಭವಿಗಳಿಗೆ ಮಳಿಗೆ ಹಂಚಿಕೆ ಮಾಡುವಂತೆ ಬರೆದಿರುವ ಪತ್ರವನ್ನು ಪತ್ರಿಕಾಗೋಷ್ಠಿಯಲ್ಲಿ ರೆಡ್ಡಿ ಪ್ರದರ್ಶಿಸಿದರು.

ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಜಿ.ಪದ್ಮಾವತಿ ಅವರು ಸಮಿತಿ ಮೇಲೆ ಒತ್ತಡ ತಂದು ಕೋಟ್ಯಂತರ ರೂ. ಅವ್ಯವಹಾರ ನಡೆಸಿದ್ದಾರೆ. ಹಾಗಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಈಗಾಗಲೇ ಹಂಚಿಕೆಯಾಗಿರುವ ಮಳಿಗೆಗಳನ್ನು ರದ್ದುಪಡಿಸಬೇಕೆಂದು ಅವರು ಒತ್ತಾಯಿಸಿದರು. ಪದ್ಮಾವತಿ ಅವರು ಈ ಹಿಂದೆ ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾಗ ಕೆಲವು ಕಾನೂನು ಬಾಹಿರ ಕ್ರಮಗಳನ್ನು ಕೈಗೊಂಡಿದ್ದರು. ಹಾಗಾಗಿ ಅಂದಿನ ಸರ್ಕಾರ ಸ್ಥಾಯಿ ಸಮಿತಿಯನ್ನೇ ರದ್ದು ಮಾಡಿತ್ತು. ಆದರೆ ಜಿ.ಪದ್ಮಾವತಿ ಅವರು ಮೇಯರ್ ಆದ ಮೇಲೂ ಅಕ್ರಮ ವ್ಯವಹಾರ ಮುಂದುವರೆಸಿದ್ದಾರೆ ಎಂದು ಪದ್ಮನಾಭರೆಡ್ಡಿ ಹರಿಹಾಯ್ದರು. ಪದೇ ಪದೇ ಕಾನೂನು ಪಂಡಿತರಂತೆ ಪೋಸ್ ಕೊಡುವ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಾಂಗ್ರೆಸ್ ದುರಾಡಳಿತದ ಬಗ್ಗೆ ಏನು ಉತ್ತರ ಕೊಡುತ್ತಾರೆಂಬುದನ್ನು ಬಹಿರಂಗಪಡಿಸುವಂತೆ ಅವರು ಆಗ್ರಹಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin