ಪರಿವರ್ತನಾ ರ‍್ಯಾಲಿ ಬೆನ್ನಲ್ಲೇ ತುಮಕೂರು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

ಈ ಸುದ್ದಿಯನ್ನು ಶೇರ್ ಮಾಡಿ

Rally--02

ತುಮಕೂರು, ನ.5- ಮಾಜಿ ಸಂಸದ ಜಿ.ಎಸ್.ಬಸವರಾಜ್ ಹಾಗೂ ಜ್ಯೋತಿ ಗಣೇಶ್ ಅವರು ಬಿಜೆಪಿಗೆ ಸೇರ್ಪಡೆಯಾದ ನಂತರ ಇಡೀ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಮೂಲೆಗುಂಪಾಗಿದ್ದು, ಪರಿವರ್ತನಾ ರ್ಯಾಲಿ ಬೆನ್ನಲ್ಲೇ ಭಿನ್ನಮತ ಭುಗಿಲೆದ್ದಿದೆ. ಸುದ್ದಿಗಾರರೊಂದಿಗೆ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ತುರ್ತು ಪರಿಸ್ಥಿತಿ ಸಂದರ್ಭದಿಂದ ಇಲ್ಲಿಯವರೆಗೂ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪಕ್ಷವನ್ನು ಸಂಘಟನೆ ಮಾಡಿದ್ದೇವೆ. ಪೊಲೀಸರ ಲಾಠಿ ಏಟು ತಿಂದು ಪಕ್ಷ ಸಂಘಟನೆ ಮಾಡಿದ್ದೇವೆ. ಜಿಪಂ, ತಾಪಂ, ಗ್ರಾಪಂ ವ್ಯಾಪ್ತಿಗಳಲ್ಲಿ ಪಕ್ಷ ಸಂಘಟನೆ ಮಾಡಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಕಾರ್ಯಕರ್ತರು ಮಾಡಿದ್ದರು.

ಕಳೆದ ಎರಡು ವರ್ಷಗಳ ಹಿಂದೆಯಷ್ಟೆ ಕಾಂಗ್ರೆಸ್‍ನಲ್ಲಿದ್ದ ಮಾಜಿ ಸಂಸದ ಜಿ.ಎಸ್.ಬಸವರಾಜ್ ಅವರನ್ನು ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಪಕ್ಷಕ್ಕೆ ಕರೆತರಲಾಗಿತ್ತು. ಇವರ ಪುತ್ರ ಜ್ಯೋತಿ ಗಣೇಶ್ ಸಹ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಕೆಜೆಪಿಯಿಂದ ಬಿಜೆಪಿಗೆ ಬಂದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮೂಲ ಕಾರ್ಯಕರ್ತರನ್ನು ಮೂಲೆಗುಂಪು ಮಾಡಲಾಗಿದೆ. ಮಾಜಿ ಸಂಸದರು ಮತ್ತು ಜಿಲ್ಲಾಧ್ಯಕ್ಷರು ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಇದು ರಾಜ್ಯಾಧ್ಯಕ್ಷರಿಗೆ ಕಾಣುತ್ತಿಲ್ಲ. ಇವರು ಬೇಕೆಂದು ಬಿಎಸ್‍ವೈ ಅವರನ್ನು ಜನರಿಂದ ದೂರ ಮಾಡುತ್ತಿದ್ದಾರೆ. ಬಿಜೆಪಿ ಪರಿವರ್ತನಾ ರ್ಯಾಲಿಗೆ ಮೂಲ ಕಾರ್ಯಕರ್ತರನ್ನು ಪರಿಗಣಿಸದೆ ಕೆಜೆಪಿಯಿಂದ ಬಂದವರಿಗೆ ಆದ್ಯತೆ ನೀಡಿದ್ದಾರೆ ಎಂದು ಅಪ್ಪ-ಮಕ್ಕಳ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರಾಧ್ಯಕ್ಷರು ಜಿಲ್ಲೆಯಲ್ಲಿ ಉದ್ಭವಿಸಿರುವ ಭಿನ್ನಮತವನ್ನು ಗಂಭೀರವಾಗಿ ತೆಗೆದುಕೊಂಡು ಅಪ್ಪ-ಮಕ್ಕಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ರಾಷ್ಟ್ರಾಧ್ಯಕ್ಷರಿಗೆ ಮನವಿ ಮಾಡಿದರು. ಪಕ್ಷ ತ್ಯಜಿಸುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆಗೆ ಇನ್ನೂ ಆರು ತಿಂಗಳಿದೆ. ಹಲವಾರು ಮಂದಿ ಮೂಲ ಕಾರ್ಯಕರ್ತರಿದ್ದಾರೆ. ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ. ಈಗಾಗಲೇ ನಿಮ್ಮನ್ನು ಪಕ್ಷದಿಂದ ಉಚ್ಚಾಟನೆ ಹಾಗೂ ಜ್ಯೋತಿ ಗಣೇಶ್ ಅವರೇ ಅಭ್ಯರ್ಥಿ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, ಮಾತನಾಡಿಕೊಳ್ಳುವವರು ಮಾತನಾಡಿಕೊಳ್ಳಲಿ. ನಾನು ಶಾಸಕನಾಗಿ, ಸಚಿವನಾಗಿ ಉತ್ತಮ ಕೆಲಸ ಮಾಡಿದ್ದೇನೆ. ನಾನು ಏನೆಂಬುದು ಜನರಿಗೆ ಮತ್ತು ಪಕ್ಷದ ಮುಖಂಡರಿಗೆ ಗೊತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಂದೀಶ್, ಕೆ.ಪಿ.ಮಹೇಶ್, ಸನತ್, ಚಂದ್ರಶೇಖರ್, ಪಂಚಾಕ್ಷರಯ್ಯ ಸೇರಿದಂತೆ ಮತ್ತಿತರರಿದ್ದರು.

Facebook Comments

Sri Raghav

Admin